ಕಾರವಾರ: ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸುವುದರ ಜೊತೆಗೆ ಜಿಲ್ಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ಸಂಬಂಧಪಟ್ಟ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚಿಸಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ವೃಧ್ದಿಗೆ ಕೈಗೊಂಡಿರುವ ಕ್ರಮಗಳ ಕುರಿತು ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ತಾಲೂಕು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾದರೆ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ, ವಿದ್ಯಾರ್ಥಿಗಳನ್ನು ಉತ್ತೀರ್ಣರಾಗುವಂತೆ ಸಿದ್ದಗೊಳಿಸುವ ಜವಾಬ್ದಾರಿ ಶಿಕ್ಷಕರದ್ದು, ಪ್ರತಿಯೊಬ್ಬ ವಿದ್ಯಾರ್ಥಿಯು ದೇಶದ ಭವಿಷ್ಯವಾಗಿದ್ದು, ಅವರ ಜೀವನವನ್ನು ರೂಪಿಸುವ ಅತೀ ದೊಡ್ಡ ಜವಾಬ್ದಾರಿ ಹೊಂದಿರುವ ಶಿಕ್ಷಕರು, ತಮ್ಮ ಸಕಲ ಅನುಭವವನ್ನು ಧಾರೆಯೆರೆದು, ತಮ್ಮ ಶಾಲೆಯ ಯಾವುದೇ ವಿದ್ಯಾರ್ಥಿ ಅನುತ್ತೀರ್ಣರಾಗದಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಗೆ ಫಲಿತಾಂಶದಲ್ಲಿ ರ್ಯಾಂಕ್ ಬರುವುದು ಮುಖ್ಯವಲ್ಲ ಆದರೆ ಜಿಲ್ಲೆಯ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ಪ್ರತಿಯೊಬ್ಬರೂ ಉತ್ತೀರ್ಣರಾಗಬೇಕು, ವಿದ್ಯಾರ್ಥಿಗಳಿಗೆ ಅನುದಾನಿತ ಶಾಲೆಗಳಲ್ಲಿ ಇರುವ ಮೂಲಭೂತ ಸಮಸ್ಯೆಗ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅಲ್ಲಿನ ಆಡಳಿತ ಮಂಡಳಿಯೊAದಿಗೆ ಚರ್ಚಿಸಿ, ವಿದ್ಯಾರ್ಥಿಗಳಿಗೆ ಸೌಲಭ್ಯಗಳು ದೊರೆಯುವಂತೆ ನೋಡಿಕೊಳ್ಳಬೇಕು, ಶಾಲಾ ಪರೀಕ್ಷೆಯ ಫಲಿತಾಂಶದಲ್ಲಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಅವರ ಬಗ್ಗೆ ವೈಯಕ್ತಿಕವಾಗಿ ಗಮನಹರಿಸಿ ಉತ್ತೀರ್ಣರಾಗುವಂತೆ ಮಾಡಬೇಕು ಎಂದರು.
ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತಂತೆ ಮತ್ತು ಪರೀಕ್ಷಾ ಕೊಠಡಿಯಲ್ಲಿ ಭಯ ಪಡದೇ ಉತ್ತರ ಬರೆಯುವ ಕುರಿತಂತೆ, ಸಮಯ ಪಾಲನೆ, ಒತ್ತಡ ನಿವಾರಣೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮನಮುಟ್ಟುವಂತೆ ವಿಶೇಷ ಉಪನ್ಯಾಸ ಆಯೋಜಿಸಬೇಕು. ಪರೀಕ್ಷಾ ಸಮಯದಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಸಲಹೆ ನೀಡಿ ಜಾಗೃತಿ ಮೂಡಿಸಬೇಕು. ಒಟ್ಟಿನಲ್ಲಿ ಶೇ. 100 ಫಲಿತಾಂಶ ಬರುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿ ಸಿಬ್ಬಂದಿಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕಾಂದೂ ಮಾತನಾಡಿ, ಜಿಲ್ಲೆಯು ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಕಳೆದ ಬಾರಿ ಈ ಹಿಂದಿಗಿAತಲೂ ಉತ್ತಮ ಸಾಧನೆ ತೋರಿದೆ. ಶಾಲಾ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಹೆಚ್ಚುವರಿ ಸಮಯವನ್ನು ಮೀಸಲಿಟ್ಟು ಕಲಿಕೆಯಲ್ಲಿ ಹಿಂದುಳಿದಿರುವ ವಿಷಯಗಳನ್ನು ಭೋಧಿಸಬೇಕು. ಈ ಬಾರಿ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಇಲ್ಲವಾಗಿದ್ದು, ಜಿಲ್ಲೆಯಲ್ಲಿ ಕ್ವಾಲಿಟಿ ಫಲಿತಾಂಶ ಈ ಬಾರಿ ಬರುವಂತಾಗಬೇಕು. ವಿದ್ಯಾರ್ಥಿಗಳನ್ನು ತಮ್ಮ ಮನೆಯ ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುವ ರೀತಿಯಲ್ಲಿ ಕಾಳಜಿ ವಹಿಸಿ ಶಿಕ್ಷಕರು ಮೇಲ್ವಿಚಾರಣೆ ಮಾಡಬೇಕು. ಫಲಿತಾಂಶ ವೃಧ್ದಿಗೆ ಈಗಾಗಲೇ ರೂಪಿಸಿರುವ 20 ಅಂಶಗಳ ಅನುಷ್ಠಾನ ಮಾತ್ರವಲ್ಲದೇ ಡಯಟ್ ಮೂಲಕ ಹೆಚ್ಚಿನ ತರಬೇತಿಯ ಅಗತ್ಯವಿದಲ್ಲಿ ಪಡೆದು, ಸಂಘಟಿತ ಪ್ರಯತ್ನದ ಮೂಲಕ ಉತ್ತಮ ಫಲಿತಾಂಶ ಬರುವಂತೆ ಕಾರ್ಯನಿರ್ವಹಿಸಿ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾರವಾರ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕಿ ಲತಾ ನಾಯ್ಕ್, ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಫಲಿತಾಂಶ ಸುಧಾರಣೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದು, ಎಸ್.ಎಸ್.ಎಲ್.ಸಿ ವಿದ್ಯಾಥಿಗಳಿಗಾಗಿ ಪೂರ್ವಾಹ್ನ, ಅಪರಾಹ್ನ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ, ಪ್ರತಿ ವಿದ್ಯಾರ್ಥಿಗೆ ಬಡ್ಡಿ ಪೇರಿಂಗ್ ಮಾಡಲಾಗಿದೆ, ವಿದ್ಯಾರ್ಥಿಗಳ ಗುಂಪು ರಚಿಸಿ ಅವರ ಫಲಿತಾಂಶ ವೃದ್ದಿಯ ಕುರಿತು ಶಿಕ್ಷಕರಿಗೆ ದತ್ತು ನೀಡಲಾಗಿದೆ. ಪ್ರತೀ ದಿನ ಮುಂಜಾನೆ ಶಿಕ್ಷಕರ ಮೂಲಕ ವೇಕ್ ಅಪ್ ಕಾಲ್ ಮಾಡಲಾಗುತ್ತಿದೆ, 15 ದಿನಗಳಿಗೊಮ್ಮೆ ಪೋಷಕರ ಸಭೆ ನಡೆಸಿ ವಿದ್ಯಾರ್ಥಿಗಳ ಪ್ರಗತಿಯ ವಿವರಗಳನ್ನು ನೀಡಲಾಗುತ್ತಿದೆ, ನಿರಂತರ ಗೈರು ಹಾಜರಾಗುತ್ತಿದ್ದ ವಿದ್ಯಾರ್ಥಿಗಳ ಮನೆ ಬೇಟಿ ನೀಡಿ ಗೈರಾಗುವುದನ್ನು ತಡೆಯಲಾಗಿದೆ. ಶಿಕ್ಷಕರಿಗೆ ವಿಶೇಷ ಸಮಾಲೋಚನಾ ಸಭೆಗಳನ್ನು ನಡೆಸಿ ತರಬೇತಿ ನೀಡಲಾಗಿದೆ. ಮಧ್ಯವಾರ್ಷಿಕ ಮತ್ತು ಪೂರ್ವ ಸಿದ್ದತಾ ಪರೀಕ್ಷೆಗಳಿಗೆ ಮಂಡಳಿಯಿಂದ ಆನ್ಲೈನ್ನಲ್ಲಿ ನೀಡುವ ಪ್ರಶ್ನೆಪತ್ರಿಕೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಕ್ವಶ್ಚನ್ ಬ್ಯಾಂಕ್ ತಯಾರಿಸಲಾಗಿದೆ. ಡಿಸೆಂಬರ್ ಅಂತ್ಯದೊಳಗೆ ಎಸ್.ಎಸ್.ಎಲ್.ಸಿ ಪಠ್ಯವಸ್ತುವನ್ನು ಪೂರ್ಣಗೊಳಿಸಲಾಗಿದೆ. ಶಾಲಾ ಹಂತದ ಮೊದಲನೇ ಪೂರ್ವ ಸಿದ್ದತಾ ಪರೀಕ್ಷೆ ನಡೆಸಲಾಗಿದ್ದು, ಪರೀಕ್ಷೆ ದಿನಾಂಕಕ್ಕಿಂತ ಮುಂಚಿತವಾಗಿ, ಸ್ಮಾರ್ಟ್ ಆಗಿ ಅಂಕಗಳಿಸುವ ಟ್ರಿಕ್ಗಳ ಕುರಿತಂತೆ ಸಂಕಲ್ಪ ಶಿಬಿರ ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ಅಭಿಪ್ರೇರಣಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಸಭೆಯಲ್ಲಿ ಡಯಟ್ ಪ್ರಾಂಶುಪಾಲ ಶಿವರಾಂ, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕುಗಳು ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು, ತಾಲೂಕು ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.