ಸಿದ್ದಾಪುರ : ಸಂಘಟನೆಗೆ ಸಮಾನ ಮನಸ್ಕರ ಅವಶ್ಯಕತೆ ಇದೆ. ಒಂದು ಕ್ರೀಡೆ ಅಥವಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರೂ ಒಟ್ಟಿಗೆ ಸೇರಿಕೊಂಡು ಒಮ್ಮತದಿಂದ ಸಂಘಟನೆ ಮಾಡಬೇಕಿದೆ. ನಿಷ್ಠೆಯಿಂದ ದುಡಿಯುತ್ತ ಬಂದರೆ ಯಶಸ್ಸು ಸಿಕ್ಕೇ ಸಿಗುತ್ತದೆ, ಸೋಲಿಗೆ ತಲೆ ಕೆಡಿಸಿಕೊಳ್ಳದೆ ನಿರಂತರ ಪ್ರಯತ್ನದಲ್ಲಿದ್ದಾಗ ಯಶಸ್ಸು ನಮ್ಮದಾಗುತ್ತದೆ ಎಂದು ಸಿದ್ದಾಪುರ ತಾಲೂಕ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ. ನಾಗರಾಜ್ ಹೇಳಿದರು.
ಅವರು ರವಿವಾರ ಸಿದ್ದಾಪುರ ತಾಲೂಕಿನ ಲಂಬಾಪುರ ಸಮೀಪದ ಗಾಳ್ಮಾವ್‌ನಲ್ಲಿ ಕಾಲಭೈರವೇಶ್ವರ ಯುವಕ ಸಂಘದವರು ಆಯೋಜಿಸಿದ್ದ ನಾಲ್ಕನೇ ವರ್ಷದ ವಾಲಿಬಾಲ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ನಾವು ಮಾಡುವ ಕೆಲಸದ ಬಗ್ಗೆ ಶ್ರದ್ಧೆ ಹಾಗೂ ನಿಷ್ಠೆ ಇದ್ದರೆ ಒಂದಲ್ಲ ಒಂದು ದಿನ ಗೆಲುವು ಸಿಕ್ಕೇ ಸಿಗುತ್ತದೆ ಒಳ್ಳೆಯ ಮನಸ್ಸಿನಿಂದ ಸಾಧಿಸುವ ಛಲದೊಂದಿಗೆ ಪ್ರಯತ್ನವಿರಬೇಕು ಎಂದ ಅವರು ನಮ್ಮ ಸಮಾಜದಲ್ಲಿ ದೇವರನ್ನ ಪೂಜೆ ಮಾಡಲು ಯುವಕರನ್ನ ಕೊಟ್ಟ ಕೊಡುಗೆ ಈ ಭಾಗದ ಜನರಿಗೆ ಸೇರುತ್ತದೆ ಆ ಕೆಲಸ ನಮ್ಮವರು ಮಾಡಬಲ್ಲರು ಎಂದು ತೋರಿಸಿಕೊಟ್ಟಿದ್ದಾರೆ ಎಂದರು.
ತಾಲೂಕು ಪಂಚಾಯತ ಮಾಜಿ ಅಧ್ಯಕ್ಷ ಸಿ.ಆರ್. ನಾಯ್ಕ್, ವಾಜಗೋಡು ಗ್ರಾಮ ಪಂಚಾಯತ್ ಸದಸ್ಯ ಕೃಷ್ಣಮೂರ್ತಿ ಐಸೂರ್, ಪ್ರಮುಖರಾದ ಐ.ಕೆ.ನಾಯ್ಕ್ ಸುಂಗೋಳಿಮನೆ, ಕೃಷ್ಣ ಲಿಂಗಾ ನಾಯ್ಕ್, ಕು. ಸಿಂಧು, ಗಣಪತಿ ಭಟ್ ಸುತ್ಲಮನೆ, ಮಾತನಾಡಿದರು. ನಾಗರಾಜ ನಾಯ್ಕ್, ಡಿ. ಕೆ ಸುತ್ಲಮನೆ, ಅಣ್ಣಪ್ಪ ಶಿರಳಗಿ, ಹೇಮಂತ್ ನಾಯ್ಕ್, ಬಿ. ಎಲ್. ನಾಯ್ಕ್, ಶ್ರೀಧರ್ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.
ವಾಜಗೋಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಚಂದ್ರಕಲಾ ನಾಯ್ಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಸುರೇಶ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ವಂದನಾ ಸಂಗಡಿಗರು ಪ್ರಾಥಿಸಿದರು, ಪತ್ರಕರ್ತ ದಿವಾಕರ ಸಂಪಖಂಡ ನಿರ್ವಹಿಸಿದರು. ರಮೇಶ ನಾಯ್ಕ್ ವಂದಿಸಿದರು.