ಹೊನ್ನಾವರ: ತಾಲೂಕಿನ ಬೇರಂಕಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ, ವಿದ್ಯಾರ್ಥಿಗಳ ಹಸ್ತಪತ್ರಿಕೆ ಬಿಡುಗಡೆ ಮತ್ತು ಸನ್ಮಾನ ಕಾರ್ಯಕ್ರಮ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಶಾಲೆಯ ವಿದ್ಯಾರ್ಥಿಗಳ ‘ಝೇಂಕಾರ’ ಹಸ್ತಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಬೇರಂಕಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಓದಿ ಹೆಚ್ಚು ಅಂಕ ಗಳಿಸಿ ಶಾಲೆಗೆ ಮತ್ತು ಊರಿಗೆ ಕೀರ್ತಿ ತರಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ವಿದ್ಯಾರ್ಥಿಗಳ ಏಳಿಗೆಗೆ ತಾಯಂದಿರ ಪಾತ್ರ ಬಹಳ ಮುಖ್ಯವಾದುದು. ಈ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕ ಎಂ.ಡಿ.ಹರಿಕಾಂತ ಅವರು ಬಹುಮುಖ ಪ್ರತಿಭಾ ಸಂಪನ್ನರಾಗಿದ್ದಾರೆ. ಅವರಿಗೆ ಈ ಬಾರಿ ರಾಜ್ಯ ಪ್ರಶಸ್ತಿ ದೊರಕಿದ್ದಕ್ಕೆ ಇಂದು ಯಕ್ಷಗಾನ ಕಿರೀಟ ನೀಡಿ ಸನ್ಮಾನಿಸಿರುವುದು ಖುಷಿಯ ಸಂಗತಿಯಾಗಿದೆ ಎಂದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪ್ರಕಾಶ ನಾಯ್ಕ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಅತಿಯಾದ ಮೊಬೈಲ್ ಫೋನ್ ಬಳಕೆಯಿಂದ ಅನಾಹುತಗಳು ಸಂಭವಿಸುತ್ತಿವೆ. ವಿದ್ಯಾರ್ಥಿಗಳು ಇದರಿಂದ ದೂರವಿದ್ದು ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಉತ್ತಮ ಸಾಧನೆ ಮಾಡಬೇಕು ಎಂದರು.
ಗ್ರಾ.ಪಂ.ಅಧ್ಯಕ್ಷ ತಿಮ್ಮಪ್ಪ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಅಧ್ಯಕ್ಷ ಎಸ್.ಎಚ್.ಗೌಡ ಮಾತನಾಡಿದರು. ಗ್ರಾ.ಪಂ. ಸದಸ್ಯರಾದ ಜಯಂತ ನಾಯ್ಕ, ಶೋಭಾ ಜಟ್ಟಿ ನಾಯ್ಕ, ಸಿಆರ್‌ಪಿ ಲಾವಣ್ಯ ಖಾರ್ವಿ, ಎಸ್ಡಿಎಂಸಿ ಅಧ್ಯಕ್ಷ ಶ್ರೀಕಾಂತ ನಾಯ್ಕ, ಉಪಾಧ್ಯಕ್ಷೆ ರೇಷ್ಮಾ ಗೌಡ ಉಪಸ್ಥಿತರಿದ್ದರು. ಮುಖ್ಯಾಧ್ಯಾಪಕ ಆರ್.ಎನ್.ಹೆಗಡೆ ಸ್ವಾಗತಿಸಿದರು. ಎಂ.ಡಿ.ಹರಿಕಾಂತ ವಂದಿಸಿದರು.