ಯಲ್ಲಾಪುರ: ಸಾಧನೆಯ ಹಾದಿಯಲ್ಲಿರುವವರನ್ನು ಗುರುತಿಸಿ, ಗೌರವಿಸುವುದು ಸಮಾಜದ ಕರ್ತವ್ಯವಾಗಬೇಕು ಎಂದು ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಆರ್.ಭಟ್ಟ ಬಿದ್ರೆಪಾಲ ಹೇಳಿದರು.
ಅವರು ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಸಿರಿ ಕಲಾ ಬಳಗ ಅಣಲಗಾರ ಹಮ್ಮಿಕೊಂಡಿದ್ದ ಸನ್ಮಾನ ಹಾಗೂ ಸಂಕ್ರಾಂತಿ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಗಣಪತಿ ಭಾಗ್ವತ ಶಿಂಬಳಗಾರ, ಭಾಗವತ ವೆಂಕಟರಮಣ ಹೆಗಡೆ ಕುಂಭತ್ತಿ, ಯೋಗ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ, ಗಾಯಕ ಗೋಪಾಲಕೃಷ್ಣ ಭಾಗ್ವತ ಗುಡ್ನಮನೆ, ಹಿರಿಯ ನಾಟಕ ಕಲಾವಿದ ಜಿ.ಎಸ್.ಭಟ್ಟ ತಟ್ಟಿಗದ್ದೆ ಅವರನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿದ್ದ ಪತ್ರಕರ್ತ ವಿ.ಜಿ.ಗಾಂವ್ಕರ ಮಾತನಾಡಿ, ಬರಿದಾಗುತ್ತಿರುವ ಹಳ್ಳಿಗಳನ್ನು ಮತ್ತೆ ಕಟ್ಟುವ ನಿಟ್ಟಿನಲ್ಲಿ ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಪ್ರಯತ್ನ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ನಿವೃತ್ತ ಪ್ರಾಧ್ಯಾಪಕ ವಿ.ಟಿ.ಭಟ್ಟ ಸೂಳಗಾರ ಮಾತನಾಡಿ, ತಮ್ಮ ತಮ್ಮ ಕ್ಷೇತ್ರದಲ್ಲಿ ದೇವತಾರಾಧನೆಯ ಭಾವನೆಯ ಕರ್ತವ್ಯ ನಿರ್ವಹಿಸುತ್ತಿರುವ ಸಾಧಕರನ್ನು ಸನ್ಮಾನಿಸುವುದೂ ದೇವರ ಆರಾಧನೆಯ ಒಂದು ಭಾಗ ಎಂದರು.
ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಪುರೋಹಿತ ಡಾ.ಶಂಕರ ಭಟ್ಟ ಬಾಲೀಗದ್ದೆ ಮಾತನಾಡಿ, ಹಳ್ಳಿಗಳಿಗೆ ಮರುಜೀವ ಕೊಡುವ ಕಾರ್ಯವನ್ನು ಒಂದಿಲ್ಲೊಂದು ರೀತಿಯಲ್ಲಿ ಯುವಕರು ಮಾಡಲು ಮುಂದಾಗಬೇಕು. ನಮ್ಮ ನಮ್ಮ ಕ್ಷೇತ್ತದಲ್ಲಿ ಸಾಧನೆ ಎಷ್ಟು ಮುಖ್ಯವೊ, ನಮ್ಮ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕಾದ ಹೊಣೆಗಾರಿಕೆಯೂ ಅಷ್ಟೇ ಮುಖ್ಯ ಎಂದರು.
ನಾಗೇಂದ್ರ ಭಾಗ್ವತ ಶೇಡಿಜಡ್ಡಿ ಪ್ರಾರ್ಥಿಸಿದರು. ಸಿರಿ ಕಲಾ ಬಳಗದ ಅಧ್ಯಕ್ಷ ರವೀಂದ್ರ ಭಟ್ಟ ವೈದಿಕರಮನೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಧರ ಅಣಲಗಾರ ನಿರ್ವಹಿಸಿ, ವಂದಿಸಿದರು.
ಕವಿಗೋಷ್ಠಿ:
ನಂತರ ನಡೆದ ಕವಿಗೋಷ್ಠಿಯಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕವಿ ಸುಬ್ರಾಯ ಬಿದ್ರೆಮನೆ, ಹಬ್ಬಗಳ ಸಂದರ್ಭದಲ್ಲಿ ಕಾಲಹರಣ ಮಾಡುವುದಕ್ಕಿಂತ, ಆ ಸಮಯ ಕಾವ್ಯದ ಹೂರಣವಾದರೆ ಸಾರ್ಥಕವಾಗುತ್ತದೆ. ಕವಿತೆಗಳ ಮೂಲಕ ಜೀವನಾನುಭವದ ಗಾಢ ಸಂದೇಶ ನೀಡಿದರೆ, ಕಾವ್ಯ ಬಹುಕಾಲ ನಿಲ್ಲಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ನವೀನಕುಮಾರ. ಎ.ಜೆ ಮಾತನಾಡಿ, ಕವಿ ಕೇವಲ ತನ್ನ ಆತ್ಮತೃಪ್ತಿಗಾಗಿ ಬರೆಯಬಾರದು. ಬರಹದಲ್ಲಿ ಸಮಾಜಕ್ಕೆ ಉತ್ತಮ ಸಂದೇಶವಿದ್ದರೆ, ಕಾವ್ಯಕ್ಕೆ ನಿಜವಾದ ಮೌಲ್ಯ ಬರುತ್ತದೆ ಎಂದರು.
ಕವಿಗಳಾದ ವಿಶ್ವೇಶ್ವರ ಗಾಂವ್ಕರ, ಶಿವರಾಮ ಗಾಂವ್ಕರ ಕಲ್ಮನೆ, ಮಧುಕೇಶವ ಭಾಗ್ವತ, ಸೀತಾ ಹೆಗಡೆ, ನರಸಿಂಹ ಹೆಬ್ಬಾರ ಮಲವಳ್ಳಿ, ಶ್ರೀಧರ ಅಣಲಗಾರ, ಶ್ರೀಲತಾ ರಾಜೀವ, ಸರೋಜಾ ಭಟ್ಟ, ದಿನೇಶ ಗೌಡ ಮಾವಿನಮನೆ ಕವನ ವಾಚಿಸಿದರು.