ಹೊನ್ನಾವರ : ಪಟ್ಟಣದ ಪ್ರಭಾತನಗರದ ಕೆ.ಇ.ಬಿ. ಕ್ರಾಸ್ ಹತ್ತಿರ ಪಲ್ಸರ್ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕ್ ನಲ್ಲಿದ್ದ ಇಬ್ಬರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಪಟ್ಟಣದ ರಾಯಲಕೇರಿಯ ವ್ಯಕ್ತಿ ಬೈಕ್ ಚಲಾಯಿಸುತ್ತಿದ್ದ, ಹಿಂಬದಿ ಸವಾರ ಕಾಲೇಜು ವಿದ್ಯಾರ್ಥಿ ಎಂದು ಹೇಳಲಾಗುತ್ತಿದೆ. ಈ ಇಬ್ಬರು ಮೂರುಕಟ್ಟೆ ಕಡೆಯಿಂದ ಹೊನ್ನಾವರಕ್ಕೆ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಟ್ಯಾಕ್ಟರ್ ಒಳರಸ್ತೆಯಿಂದ ಒಮ್ಮೆಲೆ ಹೆದ್ದಾರಿಗೆ ನುಗ್ಗಿ ಬಂದಿದ್ದರಿಂದ, ಬೈಕ್ ಟ್ಯಾಕ್ಟರ್ ಗೆ ಗುದ್ದುವುದನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಮೋರಿಗೆ ಗುದ್ದಿದೆ ಎಂದು ಪ್ರತ್ಯಕ್ಷದರ್ಶಿಯೋರ್ವರು ಮಾಹಿತಿ ನೀಡಿದ್ದಾರೆ. ಬೈಕ್ ಹಿಂಬದಿ ಸವಾರನ ಕಾಲಿಗೆ ಗಂಭೀರ ಪೆಟ್ಟಾಗಿದ್ದರೆ, ಬೈಕ್ ಚಾಲಕನ ತಲೆ, ಕೈಗೆ ಗೂ ಗಂಭಿರ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧ ಪಟ್ಟಂತೆ ಶುಕ್ರವಾರ ಬೆಳಿಗ್ಗೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿದೆ.
ಇತ್ತೀಚಿಗೆ ಅಪ್ರಾಪ್ತರು ಬೈಕ್ ಚಾಲನೆ ಮಾಡುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ. ಅಪ್ರಾಪ್ತರು ಚಲಾವಣೆ ಮಾಡುತ್ತಿರುವ ಬೈಕ್ ಅಪಘಾತ ಆಗಿರುವ ಘಟನೆ ಕೂಡ ನಡೆದಿದೆ. ಅಪ್ರಾಪ್ತರಾಗಿದ್ದಲ್ಲಿ, ಅವರ ಪಾಲಕರ ಮೇಲೆ ಪ್ರಕರಣ ದಾಖಲು ಮಾಡಿದ ಘಟನೆ ಬೇರೆಡೆ ನಡೆದಿದೆ. ಈ ಬೈಕ್ ಅಪಘಾತದಲ್ಲೂ ಅಪ್ರಾಪ್ತರು ಇರಬೇಕು ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿ ಬಂದಿದೆ. ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.