ದಾಂಡೇಲಿ : ಉತ್ತರ ಕನ್ನಡ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಬಿ.ಎನ್. ವಾಸರೆಯವರಿಗೆ ಮಂಗಳೂರಿನ ಕಲ್ಲಚ್ಚು ಪ್ರಕಾಶನದ 25ನೇ ವರ್ಷದ ಬೆಳ್ಳಿ ಹಬ್ಬದ ಸಮಾರಂಭದಲ್ಲಿ ಸಾಹಿತ್ಯ ಸಂಘಟನೆ ಕ್ಷೇತ್ರದಲ್ಲಿನ ಸೇವೆ ಪರಿಗಣಿಸಿ ‘ರಜತ ರಂಗು’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಲ್ಲಚ್ಚು ಪ್ರಕಾಶನಕ್ಕೆ 25 ವರ್ಷ ತುಂಬಿದ ನೆನಪಲ್ಲಿ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 25 ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಪ್ರಧಾನ ಸಮಾರಂಭ ಮಂಗಳೂರಿನ ಓಷನ್ ಪರ್ಲ್ ಸಭಾಂಗಣದಲ್ಲಿ ನಡೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ. ಹರಿಕೃಷ್ಣ ಪುನರೂರು, ನವ ದೆಹಲಿಯ ಕೇಂದ್ರ ಸಾಹಿತ್ಯ ಅಕಾಡೆಮಿಯ ವಿಶ್ರಾಂತ ಉಪ ಕಾರ್ಯದರ್ಶಿ ಡಾ. ಮಹಾಲಿಂಗೇಶ್ವರ ಎಸ್.ಪಿ, ಸಾಹಿತಿ ಪ್ರಭಾಕರ್ ನೀರಮಾರ್ಗ, ಕುಂದಾಪುರದ ಸಂಪೂರ್ಣಾನಂದ ಬಳ್ಕೂರು, ಬೆಂಗಳೂರಿನ ಜಯಂತ್ ನಾಯಕ್, ಹಿರಿಯ ಸಾಹಿತಿ ಡಾ ಪ್ರಥ್ವಿರಾಜ್ ನಾಯಕ್, ಡಾ. ಸ್ಮಿತಾ ನಾಯಕ್ ಮತ್ತು ಕಲ್ಲಚ್ಚು ಪ್ರಕಾಶನ ಮತ್ತು ಅದರ ಸ್ಥಾಪಕರಾದ ಮಹೇಶ್ ನಾಯಕರವರ ಉಪಸ್ಥಿತಿಯಲ್ಲಿ ಬಿ.ಎನ್.ವಾಸರೆಯವರು ಈ ಗೌರವವನ್ನು ಸ್ವೀಕರಿಸಿದರು.