ದಾಂಡೇಲಿ: ನಗರದ ಬಂಗೂರನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 2002-03 ಸಾಲಿನ ವಿದ್ಯಾರ್ಥಿಗಳಿಂದ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅರ್ಥಪೂರ್ಣವಾಗಿ ಜರುಗಿತು.
ನಿವೃತ್ತ ಸಿ.ಆರ್.ಪಿ ನಿಂಗಬಸಪ್ಪ ಚಲವಾದಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹಳೆ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನ ನೆನಪು ಮಾಡಿಕೊಂಡು ಮತ್ತೆ ಈ ರೀತಿ ಕಾರ್ಯಕ್ರಮ ಸಂಘಟಿಸುತ್ತಿರುವುದು ಸಂತಸ ತಂದಿದೆ. ನಿವೃತ್ತಿಯ ನಂತರ ಶಿಕ್ಷಕನ ಆಸ್ತಿ ಎಂದರೆ ತನ್ನ ಹಳೆಯ ವಿದ್ಯಾರ್ಥಿಗಳು ಎಂದರು.
ಶಾಲಾ ಮುಖ್ಯ ಶಿಕ್ಷಕಿ ಜುಬೇದಾ ಮಹಮ್ಮದ್ ಮಾತನಾಡಿ ವಿದ್ಯಾರ್ಥಿಗಳೇ ಗುರುಗಳ ಆಸ್ತಿ, ಗುರುಗಳನ್ನು ನೆನಪಿನಲ್ಲಿಟ್ಟುಕೊಂಡು ಗೌರವಿಸುವ ಪರಂಪರೆ ಅತ್ಯುತ್ತಮವಾಗಿದೆ. ಶಿಕ್ಷಕ ವೃತ್ತಿಗೆ ಗೌರವವಿದೆ ಎಂದು ಹೇಳಿ ಇಂತಹ ಪ್ರೀತಿಯ ಅಭಿಮಾನ ಮುಂದಿನ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದರು.
ಇದೇ ಮೊದಲ ಬಾರಿಗೆ ಈ ಶಾಲೆಯಲ್ಲಿ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಉಷಾ ಹೆಗಡೆ, ವಿಜಯ ನಿಲೇಕಣಿ, ಟೋಪ್ಪನ್ನವರ, ಶಕುಂತಲಾ ಆಚಾರ್ಯ, ಲೇನಿಟ್ ಸೆರಾವೊ, ಸೀಮಾ, ಸಮಾತಾ, ಸುಭಾಷ ನರಸಲಿಗಿ ಸೇರಿದಂತೆ 20 ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಹಳೆ ವಿದ್ಯಾರ್ಥಿಗಳಿಂದ ಶಾಲಾಭಿವೃದ್ಧಿಗಾಗಿ ಧನ ಸಹಾಯ ಮಾಡಲಾಯಿತು. ಜಾಫರ್ ಮಸಣಕಟ್ಟಿ ಹಳೆ ವಿದ್ಯಾರ್ಥಿಗಳ ಪರವಾಗಿ ಅಭಿಪ್ರಾಯ ಹಂಚಿಕೊಂಡು, ಕಾರ್ಯಕ್ರಮದಲ್ಲಿ ವಂದಿಸಿದರು.
ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾಂತೇಶ, ಶಿಕ್ಷಕಯರಾದ ರೇಷ್ಮಾ ಹಳದಿಪೂರ, ಸುನೀಲ ನಾಯಕ, ಉಷಾ ದೈವಮನಿ, ಲಕ್ಷ್ಮಿ ಕೋಕಿನಕರ, ಈರಮ್ಮ ನಡುವಿನಮನಿ ಉಪಸ್ಥಿತರಿದ್ದರು.