ಸಿದ್ದಾಪುರ: ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ಸರ್ಕಾರ ಇದೀಗ ಬಸ್ ದರವ ದರವನ್ನು ಶೇ. 15 ರಷ್ಟು ಏರಿಕೆ ಮಾಡಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮುಂದಾಗಿದೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಅಧ್ಯಕ್ಷ ಎಂ.ಕೆ.ತಿಮ್ಮಪ್ಪ ಹೇಳಿದರು.
ಬಸ್ ದರ ಏರಿಕೆ ಮತ್ತು ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಮಂಡಲದ ವತಿಯಿಂದ ಪಟ್ಟಣದಲ್ಲಿ ಹಮ್ಮಿಕೊಂಡ ಪ್ರತಿಭಟನೆಯ ನೇತೃತ್ವ ವಹಿಸಿ ಸೋಮವಾರ ಅವರು ಮಾತನಾಡಿದರು. ಆರಂಭದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಒಂದು ಕೈಯಿಂದ ಕಸಿದು ಕೊಳ್ಳುತ್ತಿತ್ತು. ಆದರೆ ಈಗ ಎರಡು ಕೈಯಿಂದ ಕಸಿದುಕೊಳ್ಳುವಂತಹ ಕೆಲಸ ಮಾಡುತ್ತಿದೆ. ಗುತ್ತಿಗೆದಾರರ ಸರಣಿ ಸಾವಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಕೃಷ್ಣ ಗೋವಿಂದ ನಾಯ್ಕ ಮಾತನಾಡಿ ಬೀದರಿನ ಗುತ್ತಿಗೆದಾರ ಸಚಿನ್ ಪಂಚಾಳ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ ಖರ್ಗೆ ಹೆಸರು ಕೇಳಿ ಬಂದಿದೆ. ಹೀಗಾಗಿ ಸಚಿವರು ತಕ್ಷಣ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. . ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುತ್ತಿದ್ದು, ಈಗಾಗಲೇ ಕೆಲವರು ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಮಿತಿ ಮೀರಿದ್ದರೂ ಆಡಳಿತದ ಚುಕ್ಕಾಣಿ ಹಿಡಿದವರು ಉದ್ದಟತನದಿಂದ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದರು.
ಬಿಜೆಪಿ ಪಕ್ಷದ ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಬೋರ್ಕರ್, ಪ್ರಮುಖರಾದ ಗುರುರಾಜ ಶಾನಭಾಗ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಮುಖರಾದ ರವಿಕುಮಾರ ನಾಯ್ಕ, ಎಸ್ ಕೆ ಮೇಸ್ತ, ತೋಟಪ್ಪ, ಕೃಷ್ಣಮೂರ್ತಿ ಕಡಕೇರಿ, ಮಂಜುನಾಥ ಭಟ್ಟ, ವಿಜಯ ಹೆಗಡೆ, ರಾಘವೇಂದ್ರ ಶಾಸ್ತ್ರಿ ಮುಂತಾದವರು ಇದ್ದರು.
ಸಿದ್ದಾಪುರ ಮಂಡಲ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರಕ್ಕೆ ಬಸ್ ದರ ಏರಿಕೆ ಹಿಂಪಡೆಯುವAತೆ ಸೂಚಿಸಬೇಕು ಮತ್ತು ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆ ಕೊಡಬೇಕು ಎಂಬ ಮನವಿಯನ್ನು ತಹಶೀಲ್ದಾರದ ಮೂಲಕ ರಾಜ್ಯಪಾಲರಿಗೆ ನೀಡಲಾಯಿತು.