ದಾಂಡೇಲಿ : ಅಗಲಿದ ಗುರು ಮಾತೆ ಶಾಲಿನಿ ಗೋವಿಂದ ಶಾನಭಾಗ ಹಳೆ ದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ನುಡಿ ನಮನ ಸಲ್ಲಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅಂಕೋಲಾ ತಾಲೂಕಿನ ಬೆಳಂಬಾರದಲ್ಲಿ ವೃತ್ತಿ ಆರಂಭಿಸಿ, ಆನಂತರ ಹಳೆ ದಾಂಡೇಲಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ, ಅಲ್ಲಿಂದ ಪದೋನ್ನತಿಗೊಂಡು ಡಿಎಫ್ಎ ಶಾಲೆಯ ಮುಖ್ಯೋಪಾಧ್ಯಾಯರಾಗಿ ವರ್ಗಾವಣೆಗೊಂಡು ಅಲ್ಲಿಯೂ ಸೇವೆಯನ್ನು ಸಲ್ಲಿಸಿ, ನಿವೃತ್ತರಾಗಿ, ವಿಶ್ರಾಂತ ಜೀವನವನ್ನು ನಡೆಸುತ್ತಿದ್ದ, ಸರಳ, ಸಜ್ಜನಿಕೆಯ ಹಾಗೂ ಮಾತೃ ಹೃದಯದ ಗುರುಮಾತೆ ಶಾಲಿನಿ ಗೋವಿಂದ ಶಾನಭಾಗ ಅವರು ಇತ್ತೀಚೆಗೆ ವಿಧಿವಶರಾಗಿದ್ದು, ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಅವರಿಂದ ಕಲಿತು ಹೋದ ಹಳೆ ವಿದ್ಯಾರ್ಥಿಗಳು ಸೇರಿ ನುಡಿ ನಮನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ನುಡಿ ನಮನ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಹೊನ್ನಾವರದ ಸೀತಾಕಾಂತ, ಸ್ಥಳೀಯವಾಗಿರುವ ಹಳೆ ವಿದ್ಯಾರ್ಥಿಗಳಾದ ರಘುವೀರ ಪೈ, ವಿಜಯ ಉಪ್ಪಾರ, ರತ್ನಮಯ್ಯ್, ಪದ್ಮಜಾ, ಅಕ್ಕವ್ವ, ಮಂಗಳ, ಹಾಗೂ ದಿ.ಶಾಲಿನಿ ಗೋವಿಂದ ಶಾನಭಾಗ ಅವರ ಮಕ್ಕಳು, ಮೊಮ್ಮಕ್ಕಳು, ಅಳಿಯಂದಿರು ಭಾಗವಹಿಸಿ, ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಅಗಲಿದ ಚೇತನ ದಿ.ಶಾಲಿನಿ ಗೋವಿಂದ ಶಾನಭಾಗ ಅವರಿಗೆ ಗೌರವ ಪೂರ್ವಕವಾಗಿ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆ ವಿದ್ಯಾರ್ಥಿಗಳು ದಿ.ಶಾಲಿನಿ ಗೋವಿಂದ ಶಾನಭಾಗ ಅವರ ವ್ಯಕ್ತಿತ್ವ, ಸಮಾಜಮುಖಿ ಬದ್ಧತೆ, ಶೈಕ್ಷಣಿಕ ಕಾಳಜಿ ಮತ್ತು ಸೇವಾ ಕೈಂಕರ್ಯವನ್ನು ವಿಶೇಷವಾಗಿ ಸ್ಮರಿಸಿ, ಅವರ ಆತ್ಮಕ್ಕೆ ಚಿರಶಾಂತಿ ಕೋರಿದರು.