ಹೊನ್ನಾವರ : ಪ್ರತಿ ವರ್ಷ ಮಳೆಗಾಲದಲ್ಲಿ ನೆರೆಯಿಂದ ತೀವ್ರ ಸಂಕಷ್ಟಕ್ಕೊಳಗಾಗುವ ನಮಗೆ ಎತ್ತರದಲ್ಲಿ ಜಾಗದಲ್ಲಿ ಮನೆ ನಿವೇಶನ ಕೊಡಬೇಕು ಎಂದು ಗುಂಡಬಾಳಾ ನದಿ ನೆರೆಸಂತ್ರಸ್ತರು ಜಿಲ್ಲಾಧಿಕಾರಿಯವರಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಗುಂಡಬಾಳಾ ನದಿ ದಂಡೆಯಲ್ಲಿರುವ ಗುಂಡಿಬೈಲ್ ಹೊಳೆಬದಿ ಕೇರಿಯ ನೆರೆಸಂತ್ರಸ್ತರು ೨೩-೧೨-೨೦೨೪ರಂದು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಪ್ರತಿ ವರ್ಷ ಮಳೆಗಾಲದಲ್ಲಿ ನಮ್ಮ ಮನೆಗಳಿಗೆ ನೆರೆ ನೀರು ನುಗ್ಗಿ ಬದುಕು ಅತಂತ್ರವಾಗಿದೆ. ಕಳೆದ ವರ್ಷ ೬ ಬಾರಿ ಗುಂಡಬಾಳಾ ನದಿಯ ನೆರೆ ನೀರಿನಿಂದ ನಮ್ಮ ಮನೆಗಳು ಜಲಾವೃತವಾಗಿದ್ದರಿಂದ ರಾತ್ರಿ ವೇಳೆಯಲ್ಲೇ ಗಂಟುಮೂಟೆ ಕಟ್ಟಿಕೊಂಡು ಕಾಳಜಿ ಕೇಂದ್ರಗಳಿಗೆ ತೆರಳಬೇಕಾಯಿತು.
ಕಾಳಜಿ ಕೇಂದ್ರಗಳಿಗೆ ಭೇಟಿ ನೀಡುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಎತ್ತರದ ಜಾಗದಲ್ಲಿ ಮನೆ ನಿವೇಶನ ನೀಡುವಂತೆ ಒತ್ತಾಯಿಸುತ್ತ ಬಂದಿದ್ದೇವೆ, ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮೊದಲಾದೆಡೆ ಮನೆ ನಿವೇಶನ ನೀಡುವಂತೆ ಆಗ್ರಹಿಸಿ ಅನೇಕ ಬಾರಿ ಲಿಖಿತ ಮನವಿ ಕೂಡ ಸಲ್ಲಿಸಿದ್ದೇವೆ. ಕೇವಲ ಆಶ್ವಾಸನೆ ಸಿಕ್ಕಿತೇ ವಿನಃ ವಾಸ್ತವದಲ್ಲಿ ಯಾವುದೇ ರೀತಿಯ ಶಾಶ್ವತ ಪರಿಹಾರ ದೊರಕಿಲ್ಲ.
ಚಿಕ್ಕನಕೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನ್ನಕಡ್ಕಲ್, ಚಿಕ್ಕನಕೋಡ ಮೊದಲಾದೆಡೆ ನಮಗೆ ನಿವೇಶನ ನೀಡಲು ಅಗತ್ಯ ಕಂದಾಯ ಭೂಮಿ ಕೂಡ ಇದೆ. ಆದರೂ ನಮ್ಮಂತ ನೆರೆನಿರಾಶ್ರಿತ ಬಡವರ ಮನವಿಗೆ ಸ್ಪಂದನೆ ಸಿಗುತ್ತಿಲ್ಲ’ ಎಂದು ಅವರು ತಮ್ಮ ಸಮಸ್ಯೆಯನ್ನು ವಿವರಿಸಿದ್ದಾರೆ.
ಇನ್ನು ಮುಂದಾದರೂ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೆ ನಮಗೆ ವಯಕ್ತಿಕವಾಗಿ ಮನೆ ನಿವೇಶನ ಮಂಜೂರಿ ಮಾಡುವ ಮೂಲಕ ಬರುವ ಮಳೆಗಾಲದ ಪೂರ್ವದಲ್ಲಿಯಾದರೂ ಎತ್ತರದ ಜಾಗದಲ್ಲಿ ಸುರಕ್ಷಿತ ಬದುಕು ಕಟ್ಟಿಕೊಳ್ಳಲು ಅನುವು ಮಾಡಿಕೋಡಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಮನವಿಗೆ ಸ್ಪಂದಿಸದಿದ್ದಲ್ಲಿ ಧರಣಿ, ಸತ್ಯಾಗ್ರಹದ ಮೂಲಕ ನಮ್ಮ ಹಕ್ಕೊತ್ತಾಯ ಮಂಡಿಸುವುದು ಅನಿವಾರ್ಯವಾಗಬಹುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.