ಹಳಿಯಾಳ : ತಾಲ್ಲೂಕಿನಾದ್ಯಂತ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರನ್ನು ಗುರುತಿಸಿ, ಅವರನ್ನು ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆಯನ್ನು ನೀಡುವುದರ ಜೊತೆಗೆ ಅವರ ತಂದೆ ತಾಯಿಯವರಿಗೂ ಕೂಡ ಮಕ್ಕಳ ಮೇಲೆ ನಿಗಾ ಇಡುವಂತೆ ತಿಳುವಳಿಕೆ ನೀಡುವ ಕಾರ್ಯವು ಶನಿವಾರ ಹಳಿಯಾಳ ಪೊಲೀಸ್ ಠಾಣೆಯಲ್ಲಿ ನಡೆಯಿತು.
ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರಿಗೆ ಪಿಎಸ್ಐ ವಿನೋದ್ ರೆಡ್ಡಿ ಹಾಗೂ ಕೃಷ್ಣೇಗೌಡ ಅರಕೇರಿ ಅವರು ಎಚ್ಚರಿಕೆಯನ್ನು ನೀಡಿ, ಕಣಿಕ ಸುಖಕ್ಕಾಗಿ ವ್ಯಸನಗಳಿಗೆ ದಾಸರಾಗದೆ, ಸುಸಂಸ್ಕೃತ ಜೀವನ ನಡವಳಿಕೆಗಳನ್ನು ಮೈಗೂಡಿಸಿಕೊಂಡು ಪ್ರಜ್ಞಾವಂತರಾಗಿ ಬಾಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ವ್ಯಸನಕ್ಕೆ ಬಲಿಯಾಗುತ್ತಿರುವ ಯುವಕರ ತಂದೆ ತಾಯಿಯವರಿಗೂ ತಿಳುವಳಿಕೆಯನ್ನು ನೀಡಲಾಯಿತು.
ವ್ಯಸನಕ್ಕೆ ಬಲಿಯಾಗಿ ಕಾನೂನು ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ರಾತ್ರಿ 10.30 ನಂತರ ಅಲ್ಲಿ ಇಲ್ಲಿ ಓಡಾಡುತ್ತಿರುವುದು ಕಂಡುಬಂದಲ್ಲಿ ಪ್ರಶ್ನಿಸಲಾಗುವುದು , ಸುಖ ಸುಮ್ಮನೆ ರಾತ್ರಿ ಓಡಾಡುವುದು ಕಂಡು ಬಂದಲ್ಲಿ ಬಿಎನ್ಎಸ್ಎಸ್ ರೀತಿಯ ಕ್ರಮ ವಹಿಸಲಾಗುವುದೆಂದು ಪಿಎಸ್ಐ ಗಳಾದ ವಿನೋದ್ ರೆಡ್ಡಿ ಮತ್ತು ಕೃಷ್ಣೇಗೌಡ ಅರಕೇರಿ ಅವರು ಎಚ್ಚರಿಕೆಯನ್ನು ನೀಡಿದರು.