ಕಾರವಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಜನಪರ ಕಾರ್ಯಕ್ರಮಗಳ ಪ್ರಯೋಜನಗಳನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚನೆ ನೀಡಿದರು.
ಅವರು ಶನಿವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪರಿಶೀಲನಾ ಸಭೆಯ ಆಧ್ಯಕ್ಷತೆ ವಹಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳಲ್ಲಿನ ಅನುಷ್ಠಾನ ನಿಯಮಾವಳಿಗಳು ಅತ್ಯಂತ ಸರಳ ಮತ್ತು ಸ್ಪಷ್ಠವಾಗಿದ್ದು ಇದರ ಅನುಷ್ಠಾನದಲ್ಲಿ ಅಧಿಕಾರಿಗಳಿಗೆ ಯಾವುದೇ ಗೊಂದಲಗಳಾಗುವುದಿಲ್ಲ, ಆದರೂ ಈ ಯೋಜನೆಗಳನ್ನು ನಿರೀಕ್ಷಿತ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳಿಗೆ ಏನು ಸಮಸ್ಯೆ ಎಂದ ಸಂಸದರು, ಕೇಂದ್ರದ ಯೋಜನೆಗಳ ಪ್ರಯೋಜನವು ಜಿಲ್ಲೆಯ ಎಲ್ಲಾ ಅರ್ಹ ಸಾರ್ವಜನಿಕರಿಗೆ ದೊರೆಯಬೇಕು, ಯಾವುದೇ ಅರ್ಹ ವ್ಯಕ್ತಿ ಯೋಜನೆಯಿಂದ ವಂಚಿತರಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು, ಕೇಂದ್ರದ ಯೋಜನೆಗಳು ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಹೆಚ್ಚಿನ ಅನುಕೂಲವಾಗುವಂತಹ ಉದ್ದೇಶಗಳನ್ನು ಹೊಂದಿವೆ ಎಂದರು.
ಜಿಲ್ಲೆಯಲ್ಲಿ ಆಯುಷ್ಮಾನ್ ಕಾರ್ಡ್ ವಿತರಣೆಯಲ್ಲಿ ಮತ್ತು ಆಯುಷ್ಮಾನ್ ವಯೋ ವಂದನಾ ಕಾರ್ಡ್ ವಿತರಣೆಯಲ್ಲಿ ಇನ್ನು ಹೆಚ್ಚಿನ ಪ್ರಗತಿ ಸಾಧಿಸಬೇಕಿದೆ. ಕಾರ್ಡ್ ನೋಂದಣಿಯಲ್ಲಿ ಇರುವ ತಾಂತ್ರಿಕ ಸಮಸ್ಯೆ ಬಗೆಹರಿಸಿ, ಸಾರ್ವಜನಿಕರಿಗೆ ಯೋಜನೆಯ ಪ್ರಯೋಜನ ಒದಗಿಸಿ. ಜಿಲ್ಲೆಯಾದ್ಯಂತ ವಿಶೇಷ ಕ್ಯಾಂಪ್ಗಳನ್ನು ಆಯೋಜಿಸಿ 6 ತಿಂಗಳ ಒಳಗೆ ಆರೋಗ್ಯ ಕಾರ್ಡ್ಗಳ ವಿತರಣೆಯಲ್ಲಿ ಸಂಪೂರ್ಣ ಗುರಿ ಸಾಧಿಸುವಂತೆ ಮತ್ತು 100 ದಿನಗಳಲ್ಲಿ ಕ್ಷಯಮುಕ್ತ ಕಾರ್ಯಕ್ರಮವನ್ನು ಹೆಚ್ಚು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದಿ ಬದಿ ವ್ಯಾಪಾರಿಗಳಿಗೆ ನೆರವು ನೀಡುವ ಪಿಎಮ್ ಸ್ವನಿಧಿ ಯೋಜನೆಯಲ್ಲಿ ಪ್ರಸ್ತುತ ಗುರುತಿಸಿರುವ ಸಂಖ್ಯೆಗಿಂತಲೂ, ಇನ್ನೂ ಹೆಚ್ಚು ಅರ್ಹ ಫಲಾನುಭವಿಗಳನ್ನು ಜಿಲ್ಲೆಯಲ್ಲಿದ್ದು ಅವರೆಲ್ಲರಿಗೂ ಈ ಯೋಜನೆಯ ಪ್ರಯೋಜನ ದೊರಕಿಸುವಂತೆ ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದರು.
ವಿಶ್ವಕರ್ಮ ಯೋಜನೆಯಡಿ ಇದುವರೆಗೆ 16,552 ಅರ್ಜಿಗಳನ್ನು ಸ್ವೀಕರಿಸಿ, 10,000 ಮಂದಿಯನ್ನು ತರಬೇತಿಗೆ ನೊಂದಾಯಿಸಿ, ಕೇವಲ 2,720 ಮಂದಿಗೆ ಮಾತ್ರ ತರಬೇತಿ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲಗಿರುವ ತರಬೇತಿ ಕೆಂದ್ರಗಳೊಂದಿಗೆ ಸಮನ್ವಯ ಸಾಧಿಸಿ, ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ಅಸಂಘಟಿತ ಕುಶಲ ಕರ್ಮಿಗಳಿಗೆ ತರಬೇತಿ ನೀಡಿ, ಅವರಿಗೆ ಬ್ಯಾಂಕ್ಗಳಿಂದ ಆರ್ಥಿಕ ನೆರವು ಒದಗಿಸಿ ಅವರನ್ನು ಉದ್ಯಮಿಗಳನ್ನಾಗಿ ಮಾಡಬೇಕು ಎಂದರು.
ಪಿಮ್ ಸೂರ್ಯ ಘರ್ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 244 ಮಂದಿ ಮಾತ್ರ ನೋಂದಣಿ ಮಾಡಿದ್ದು, ಹೆಸ್ಕಾಂ ವತಿಯಿಂದ ಮನೆ ಮನೆಗಳಿಗೆ ಭೇಟಿ ನೀಡಿ, ಯೋಜನೆಯ ಕುರಿತಂತ ಹೆಚ್ಚಿನ ಜಾಗೃತಿ ಮೂಡಿಸಿ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೌರ ಮೇಲ್ಚಾವಣಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವಂತೆ ತಿಳಿಸಿದರು.
ಜಿಲ್ಲೆಯಲ್ಲಿ ಮುದ್ರಾ ಯೋಜನೆಯ ಶಿಶು, ಕಿಶೋರ್ ಮತ್ತು ತರುಣ್ ವಿಭಾಗಗಳಲ್ಲಿ ಇದುವರೆಗೆ ಒಟ್ಟು 19,092 ಮಂದಿಗೆ 312.5 ಕೋಟಿ ರೂ ಗಳ ಸಾಲ ವಿತರಿಸಿದ್ದು, ಈ ಯೋಜನೆಯಡಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸಣ್ಣ ಪುಟ್ಟ ಕಾರಣಗಳಿಗೆ ತಿರಸ್ಕೃತ ಮಾಡದೇ, ಗರಿಷ್ಠ ಸಂಖ್ಯೆಯಲ್ಲಿ ಸಾಲ ವಿತರಿಸಿ, ಇದರಿಂದ ಜಿಲ್ಲೆಯಲ್ಲಿ ಹೊಸ ಉದ್ಯಮಗಳು ಅರಂಭಗೊAಡು ಸ್ಥಳೀಯರಿಗೆ ಹೆಚ್ಚಿನ ಉದ್ಯೋಗವಕಾಶಗಳು ದೊರೆಯಲಿವೆ ಎಂದರು.
ಕೃಷಿ ಮೂಲಭೂತ ಸೌಕರ್ಯ ಯೋಜನೆಯಡಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ 105 ಮಂದಿಗೆ 98 ಕೋಟಿ ರೂ ಗಳನ್ನು ವಿತರಿಸಲಾಗಿದೆ. ಈ ಯೋಜನೆಯಡಿ ಜಿಲ್ಲೆಯಲ್ಲಿ ಕೋಲ್ಡ್ ಸ್ಟೋರೇಜ್ ಆರಂಭಿಸುವ ಬಗ್ಗೆ ರೈತರನ್ನು ಪ್ರೋತ್ಸಾಹಿಸುವಂತೆ ತಿಳಿಸಿದ ಸಂಸದರು, ಯೋಜನೆಯ ಅನುಷ್ಠಾನದಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತರುವಂತೆ ಹಾಗೂ ಈ ವರ್ಷ ನೀಡಿರುವ ಗುರಿಯಲ್ಲಿ ಸಂಪೂರ್ಣ ಪ್ರಗತಿ ಸಾಧಿಸುವಂತೆ ತಿಳಿಸಿದರು.
ಪ್ರಧಾನಮಂತ್ರಿ ಜೀವನ್ ಜ್ಯೋತಿ ಬೀಮಾ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಬೀಮಾ ಯೋಜನೆ ಮತ್ತು ಅಂಚೆ ಕಚೇರಿಯಲ್ಲಿರುವ ಗ್ರೂಫ್ ಆಕ್ಷಿಡೆಂಟ್ ಗಾರ್ಡ್ (ಗ್ಯಾಗ್ ) ಯೋಜನೆಗಳ ಬಗ್ಗೆ ಸಾರ್ವಜನಿಕರಿಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಯೋಜನೆಗಳ ಮೂಲಕ ಅಪಘಾತ ಸಂದರ್ಭದಲ್ಲಿ ಸಂತ್ರಸ್ಥ ಕುಟುಂಬಗಳಿಗೆ ನೆರವು ದೊರೆಯುವಂತೆ ನೋಡಿಕೊಳ್ಳಿ ಎಂದರು.
ಜಿಲ್ಲೆಯಲ್ಲಿ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯ ಸೌಲಭ್ಯವನ್ನು ಜಿಲ್ಲೆಯ ಅರ್ಹ ರೈತರಿಗೆ ದೊರಕಿಸುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನ ನಡೆಸಿದ್ದು ತಾಂತ್ರಿಕ ಕಾರಣಗಳಿಂದ ವಿಮೆಯ ಮೊತ್ತ ದೊರೆಯಲು ವಿಳಂಬವಾಗಿದ್ದು ಈ ತಿಂಗಳೊಳಗೆ ಪರಿಹಾರದ ಮೊತ್ತ ರೈತರಿಗೆ ತಲುಪಲಿದೆ ಎಂದ ಅವರು ಜಿಲ್ಲೆಯಲ್ಲಿ ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ 1,56,404 ರೈತರು ಆರ್ಥಿಕ ನೆರವು ಪಡೆಯುತ್ತಿದ್ದು ಇದುವರೆಗೆ 18 ಕಂತುಗಳ ಹಣ ಬಿಡುಗಡೆಯಾಗಿದ್ದು, ಈ ಮೊತ್ತ ದೊರೆಯುವುದರ ಬಗ್ಗೆ ಯಾವುದೇ ಸಮಸ್ಯೆಯಿದ್ದಲ್ಲಿ ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವಂತೆ ತಿಳಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿ.ಪಂ. ಸಿಇಓ ಈಶ್ವರ ಕಾಂದೂ, ಕಾರವಾರ ಉಪ ವಿಭಾಗಾಧಿಕಾರಿ ಕನಿಷ್ಕ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.