Slide
Slide
Slide
previous arrow
next arrow

ಹೆತ್ತೊಡಲ ನೋಯಿಸದೆ ಬದುಕಿದರೆ ಜೀವನ ಸಾರ್ಥಕ : ದಾಮೋದರ ಶರ್ಮಾ

300x250 AD

ಸರಸ್ವತಿ ಪಿ.ಯು ಕಾಲೇಜಿನಲ್ಲಿ‌ ಸಂಸ್ಕಾರಧಾರೆ ಕಾರ್ಯಕ್ರಮ : ಪಾಲಕರು, ಮಕ್ಕಳ ಕಣ್ಣೀರ ಸ್ಪಂದನ

ಕುಮಟಾ : ಎಲ್ಲಿಯೋ ಹರಕೆ ಹೊತ್ತು, ಜೀವನಕ್ಕೆ ನೆರವಾಗುತ್ತಾರೆಂದು ಮಕ್ಕಳನ್ನು ಪಡೆದು ಅವರ ಸಂತೋಷದಲ್ಲಿಯೇ ತಮ್ಮ ಸಂತೋಷವನ್ನು ಕಾಣುವ ತಂದೆ ತಾಯಿಗಳನ್ನು ನೋಯಿಸದಂತೆ ಬದುಕಿದರೆ ಜೀವನ ಸಾರ್ಥಕ ಎಂದು ಖ್ಯಾತ ವಾಗ್ಮಿ ಎನ್.ಆರ್. ದಾಮೋದರ ಶರ್ಮಾ ಅಭಿಪ್ರಾಯಪಟ್ಟರು.

ಅವರು ವಿಧಾತ್ರಿ ಅಕಾಡೆಮಿ ಮಂಗಳೂರು ಇವರ ಸಹಯೋಗದೊಂದಿಗೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನಲ್ಲಿ ನಡೆಯುತ್ತಿರುವ ಬಿ.ಕೆ ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ಶನಿವಾರ ನಡೆದ ‘ಸಂಸ್ಕಾರಧಾರೆ’ ಕಾರ್ಯಕ್ರಮದಲ್ಲಿ ಮಾತಾ ಪಿತೃ ಪೂಜನ ಹಾಗೂ ಗುರು ನಮನ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು.

ಹೆತ್ತವರ ಪ್ರಾಮಾಣಿಕ ಪ್ರಯತ್ನಕ್ಕೆ ಬೆಂಬಲವಾಗಿ ನಿಂತು ಅವರ ಘನತೆ, ಗೌರವಕ್ಕೆ ಚ್ಯುತಿ ಬಾರದಂತೆ ಬದುಕಿ, ಸಾಧನೆಯ ಎಸಲುಗಳಿಂದ ತಂದೆ ತಾಯಿಯನ್ನು ಪೂಜಿಸಿದಾಗ ಜೀವನ ಸಾರ್ಥಕವಾಗುವುದು. ವಿದ್ಯಾರ್ಥಿಗಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ಮೈಗೂಡಿಸುವ, ದೇಶದ ಸಂಸ್ಕೃತಿಯನ್ನು ಬಿತ್ತರಿಸುವಂತಹ ಕಾರ್ಯಕ್ರಮದ ಮೂಲಕ ಭವ್ಯ ಭಾರತಕ್ಕೆ ವಿಧಾತ್ರಿ ಅಕಾಡೆಮಿ, ಕೊಂಕಣ ಎಜ್ಯುಕೇಶನ್  ವಿದ್ಯಾಸಂಸ್ಥೆ ಮಹತ್ತರವಾದ ಕೊಡುಗೆ ನೀಡುತ್ತಿದೆ. ರಾಷ್ಟ್ರ ನಿರ್ಮಾಣ ಕೈಂಕರ್ಯ ಮಂದಿರವಿದು ಎಂದು ರಾಷ್ಟ್ರಸೇವೆಯ ಜವಾಬ್ದಾರಿ ಹೊತ್ತು ಸಂಸ್ಥೆ ನಿಜಕ್ಕೂ ಸಮಾಜಕ್ಕೆ ಮಾದರಿ ಎಂದರು.

ಮಾತು ಮತ್ತು ಅದರ ಅರ್ಥ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತದೆಯೋ ಹಾಗೆಯೇ ತಂದೆ ತಾಯಿಯೂ ಮಕ್ಕಳ ಭವಿಷ್ಯಕ್ಕಾಗಿ ಒಬ್ಬರಿಗೊಬ್ಬರು ತಮ್ಮ ಇಡೀ ಜೀವನವನ್ನೇ ತ್ಯಾಗ ಮಾಡುತ್ತಾರೆ. ವಿದ್ಯಾವಂತರು ಎನ್ನುವ ಭಾವೋದ್ರೇಕದಿಂದ ಅಥವಾ ತಾತ್ಕಾಲಿಕ ಆಕರ್ಷಣೆಗೆ ಒಳಗಾಗಿ ಹೆತ್ತವರ ತ್ಯಾಗವನ್ನು ದಿಕ್ಕರಿಸದಿರಿ. ಹೆತ್ತವರ ತ್ಯಾಗ ಮತ್ತು ನಾವು ಏಕೆ ದಾರಿ ತಪ್ಪುತ್ತಿದ್ದೇವೆ ಎನ್ನುವ ಆತ್ಮಾವಲೋಕನವೇ ನಮ್ಮನ್ನು ಸರಿದಾರಿಗೆ ತರುವುದು ಎಂದು ದಾಮೋದರ ಶರ್ಮಾ ಅಭಿಪ್ರಾಯಪಟ್ಟರು.

300x250 AD

ಅನೇಕ ಅನೇಕ ಉದಾಹರಣೆಗಳ ಮೂಲಕ ಹಲವರ ಬದುಕನ್ನು ಚಿತ್ರಿಸಿದವರು ಕಾಲೇಜು ದಿನಗಳಲ್ಲಿ ಉಂಟಾಗುವ ಆಕರ್ಷಣೆ ಪ್ರೀತಿ ಇವುಗಳನ್ನೇ ಸತ್ಯವೆಂದು ಭಾವಿಸಿ, ನಾವು ಜೀವನವನ್ನು ಅಂತ್ಯ ಮಾಡಿಕೊಳ್ಳುತ್ತಿದ್ದೇವೆ. ಆದರೆ ನಮ್ಮನ್ನು ನಂಬಿಕೊಂಡ ಪಾಲಕರಿಗೆ ನಾವು ನೀಡಬೇಕಾಗಿರುವುದು ಏನು ಎಂಬುದರ ಬಗ್ಗೆ ಚಿಂತನೆಗಳು ನಡೆಯಬೇಕು. ಯಾರದೋ ಮನೆಯ ಫ್ರಿಜ್ಜಿನಲ್ಲಿ ಮಾಂಸಗಳಾಗದೆ, ತಂದೆ ತಾಯಿಯನ್ನು ತಂಪಾಗಿ ನೋಡಿಕೊಂಡು ಅವರ ಮನಸ್ಸಿಗೆ ತಂಪೆರೆವ ಫ್ರಿಡ್ಜ್ ಗಳಾಗಿರಬೇಕು ಎಂದರು.

ಆರಂಭದಲ್ಲಿ ಕೊಂಕಣ ಸಂಸ್ಥೆಯ ಹಿರಿಯ ವಿಶ್ವಸ್ಥರಾದ ರಮೇಶ ಪ್ರಭು ಅವರು ಪ್ರಸ್ತುತ ಕುಸಿಯುತ್ತಿರುವ ಮಾನವೀಯ ಮೌಲ್ಯಗಳ ಕುರಿತು ಕಳವಳ ವ್ಯಕ್ತಪಡಿಸಿದರು.
ಪ್ರಾಚಾರ್ಯ ಕಿರಣ ಭಟ್ಟ ಹುತ್ಗಾರ ಸ್ವಾಗತ ಗೈದರು. ವೇದಿಕೆಯಲ್ಲಿ ವಿಧಾತ್ರಿ ಅಕಾಡಮಿ ಸಹ ಸಂಸ್ಥಾಪಕ ಗುರುರಾಜ ಶೆಟ್ಟಿಯವರು ಕೊಂಕಣದ ವಿಶ್ವಸ್ಥರಾದ ಡಿ.ಡಿ ಕಾಮತ್ ಉಪಸ್ಥಿತರಿದ್ದರು. ಉಪನ್ಯಾಸಕ ಕಾಗಾಲ ಚಿದಾನಂದ ಭಂಡಾರಿ ವಂದಿಸಿದರು. ಗಣೇಶ ಜೋಶಿ ಸಂಕೊಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಮಾತಾಪಿತೃ ಪೂಜನದಲ್ಲಿ ದಾಮೋದರ ಶರ್ಮರ ಮಾತುಗಳಿಗೆ ಕಣ್ಣೀರಧಾರೆಯ ಸ್ಪಂದನ ಸಿಕ್ಕಿದೆ. ಭಾವ ಪರವಶರಾದ ಶ್ರೋತೃಗಳು ಕಣ್ಣೀರು ಸುರಿಸುತ್ತಾ ನಿಂತ ದೃಶ್ಯಗಳು ಕಂಡುಬಂತು. ವಿದ್ಯಾರ್ಥಿಗಳು ತಮ್ಮ ತಂದೆತಾಯಿ ಹಾಗೂ ಗುರುಗಳನ್ನು ಪೂಜಿಸುವುದರ ಮಹತ್ವದ ಕುರಿತು ಉಪನ್ಯಾಸ ಜರುಗಿತು. ಈ ವೇಳೆ ವಿದ್ಯಾರ್ಥಿಗಳು ತಮ್ಮ ಮಾತಾ ಪಿತೃಗಳ ಪೂಜೆಗೈದರು. ಈ ವೇಳೆ ತೀವ್ರಭಾವುಕವಾದ ಸನ್ನಿವೇಶದಲ್ಲಿ ನೆರೆದವರು ಕಣ್ಣಾಲಿಗಳು ತೇವಗೊಂಡವು.

ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ ಮೂಡಿಸುವ ಪ್ರಯತ್ನದಲ್ಲಿ ನಾವಿದ್ದೇವೆ. ಪ್ರತಿವರ್ಷ ಇಂತಹ ಕಾರ್ಯಕ್ರಮಗಳನ್ನು ಪ್ರಾರಂಭದಲ್ಲಿಯೇ ಹಮ್ಮಿಕೊಳ್ಳುವ ಯೋಜನೆ ಇದೆ. ಸಂಸ್ಕಾರಯುತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ನೀಡುವುದು, ಸುಭದ್ರ ದೇಶ ಕಟ್ಟುವುದು ನಮ್ಮ ಕನಸು – ಗುರುರಾಜ ಶೆಟ್ಟಿ, ಸಹಸಂಸ್ಥಾಪಕರು ವಿಧಾತ್ರಿ ಅಕಾಡೆಮಿ.

Share This
300x250 AD
300x250 AD
300x250 AD
Back to top