ಸಿದ್ದಾಪುರ: ಪಟ್ಟಣದ ಬಾಲಿಕೊಪ್ಪದಲ್ಲಿರುವ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಏಳನೇ ವರ್ಷದ ಜಾತ್ರೋತ್ಸವ ಜ.10ರಿಂದ 15ರವರೆಗೆ ಶೃದ್ಧಾ-ಭಕ್ತಿಯಿಂದ ಹಾಗೂ ವಿಜೃಂಭಣೆಯಿಂದ ಆಚರಿಸಲು ಎಲ್ಲ ಸಿದ್ದತೆಗಳನ್ನು ನಡೆಸಲಾಗುತ್ತಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಡಾ.ಕೆ.ಶ್ರೀಧರ ವೈದ್ಯ ಹೇಳಿದರು.
ಪಟ್ಟಣದ ಬಾಲಿಕೊಪ್ಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸುದ್ದಿಗೋಷ್ಠಿ ನಡೆಸಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಮಾಡಿ ಅವರು ಮಾತನಾಡಿದರು.
ಜ.10ರಂದು ಅಯ್ಯಪ್ಪ ಸ್ವಾಮಿಯ ಉತ್ಸವ ಪ್ರಾರಂಭಗೊಳ್ಳಲಿದೆ. ಧ್ವಜಾರೋಹಣ, ದುರ್ಗಾಹವನ, ರಾತ್ರಿ ಪಡಿಪೂಜೆ, 11ರಂದು ದೇವಸ್ಥಾನದ ತಂತ್ರಿಯವರಾದ ಬ್ರಹ್ಮಶ್ರೀ ತರಣನಲ್ಲೂರು ಪದ್ಮನಾಬನ್ ಉಣ್ಣಿ ನಂಬೂದರಿ ಇವರಿಂದ ವಿಶೇಷ ಪೂಜೆ, ಸಾರ್ವತ್ರಿಕ ಗಣಹೋಮ, ಪ್ರಸಾದ ವಿತರಣೆ, ನಂತರ ಅನ್ನಸಂತರ್ಪಣೆ ನಡೆಯಲಿದೆ. 12ರಂದು ರುದ್ರಹವನ,ಆಶ್ಲೇಷಬಲಿ, 13ರಂದು ನರಸಿಂಹ ಹವನ, 14ರಂದು ಅಷ್ಟಾಭಿಷೇಕ, ವಿಶೇಷ ಪೂಜೆ, ಸಂಜೆ 5ರಿಂದ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಅಂಬಾರಿ ಉತ್ಸವನಡೆಯಲಿದ್ದು ಸೊರಬ ತಾಲೂಕಿನ ಜಡೆ ಹಿರೇಮಠದ ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳಿಂದ ಆಶೀರ್ವಚನ ಹಾಗೂ ಅಂಬಾರಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. 15ರಂದು ಓಕಳಿ ನಡೆಯಲಿದೆ ಎಂದು ಹೇಳಿದರು.
ಜಾತ್ರಾ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ ಮಾತನಾಡಿ ಜಾತ್ರೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆಯಿಂದ ರಾತ್ರಿಯವರೆಗೆ ವಿಶೇಷ ಪೂಜೆ, ಭಜನೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂಗೀತ, ಭಜನೆ,ರಸಮಂಜರಿ, ಯಕ್ಷಗಾನ ಹಾಗೂ ಮತ್ತಿತರ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಥಳೀಯ ಕಲಾವಿದರಿಂದ ಹಾಗೂ ಕಲಾಸಂಘಗಳಿAದ ಆಯೋಜಿಸಲಾಗಿದೆ. ವಿವಿಧ ಮನರಂಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸುದರ್ಶನ ಪಿಳ್ಳೆ, ಶ್ರೀನಿವಾಸ ಪ್ರಭು, ಸದಾನಂದ ಕಾಮತ್, ರಾಘವೇಂದ್ರ ನಾಯ್ಕ, ಎ.ಜಿ.ನಾಯ್ಕ, ಶ್ರೀಪಾದ ಹೆಗಡೆಹಾಗೂ ದೇವಸ್ಥಾನ ಸಮಿತಿಯ ಹಾಗೂ ಜಾತ್ರೋತ್ಸವ ಸಮಿತಿ ಪದಾಧಿಕಾರಿಗಳಿದ್ದರು.