ಶಿರಸಿ: ಅತ್ಯಂತ ವೈವಿಧ್ಯಮಯವೂ ವಿನೂತನವೂ ಆಗಿ ಜ.2ರಂದು ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ನ ಚಂದನ ಹಬ್ಬ ಸಂಪನ್ನಗೊಂಡಿತು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಚಂದನ ಹಬ್ಬದಲ್ಲಿ ಆಗಮಿಸಿದ ಸರ್ವರನ್ನು ಮಿಯಾರ್ಡ್ಸ ಸಂಸ್ಥೆಯ ಸಂಸ್ಥಾಪಕ, ಕಾರ್ಯದರ್ಶಿಗಳಾದ ಎಲ್.ಎಮ್. ಹೆಗಡೆ ಗೋಳಿಕೊಪ್ಪ ಸ್ವಾಗತಿಸಿದರು. ಉದ್ಘಾಟಕರಾಗಿ ಆಗಮಿಸಿದ್ದ ಐಪಿಡಿಪಿ ಬೆಂಗಳೂರು ಇದರ ಅಧ್ಯಕ್ಷರಾದ ನಯನ ಜ್ಯೋತಿ ಎನ್. ಜಯರಾಮನ್ ಮಾತನಾಡುತ್ತಾ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಗುಣಮಟ್ಟದ ಹಾಗೂ ಸಂಸ್ಕಾರಯುತ ಶಿಕ್ಷಣ ನೀಡುತ್ತಿರುವ ಚಂದನ ಶಾಲೆಯ ಕಾರ್ಯ ಅಭಿನಂದನಾರ್ಹವಾಗಿದೆ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ,ಮಾಡುತ್ತಿರುವ ಮಕ್ಕಳನ್ನು ನೋಡಿ ಸಂತಸವಾಯಿತು ಈ ಶಾಲೆ ಇನ್ನಷ್ಟು ಬೆಳಗಲಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಚಂದನ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ವಿ.ಜಿ. ಹೆಗಡೆ ಕರಸುಳ್ಳಿ ದಂಪತಿಗಳನ್ನು ಸನ್ಮಾನಿಸಲಾಯಿತು. ಸನ್ಮಾನ ನೆರವೇರಿಸಿ ಮಾತನಾಡಿದ ಶಿರಸಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ನಾಗರಾಜ ನಾಯ್ಕ ಮಾತನಾಡಿ ಚಂದನ ಶಾಲೆ ನಮ್ಮ ತಾಲೂಕು ,ಜಿಲ್ಲೆ, ರಾಜ್ಯ ಮಟ್ಟದಲ್ಲಿಯೂ ಹೆಸರನ್ನು ಗಳಿಸಿದೆ.ಕಳೆದ 12 ವರ್ಷಗಳಿಂದ ನಿರಂತರವಾಗಿ ಎಸ್ಎಸ್ಎಲ್ಸಿ ಯಲ್ಲಿ 100 ಕ್ಕೆ 100 ಫಲಿತಾಂಶ ಸಾಧಿಸಿ ಅಪ್ರತಿಮ ಸಾಧನೆ ಮಾಡಿದೆ ಪಠ್ಯವಲ್ಲದೇ ಕ್ರೀಡೆ ಸಾಂಸ್ಕೃತಿಕ ಯೋಗ ಎಲ್ಲಾ ಕ್ಷೇತ್ರಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ ಇದು ನಿಜಕ್ಕೂ ನಮಗೆ ಸಂತೋಷದ ವಿಷಯ.ಮಕ್ಕಳು ಅಂದಿನ ಪಾಠವನ್ನು ಅಂದೇ ಅಭ್ಯಾಸ ಮಾಡುವದನ್ನು ರೂಢಿಸಿಕೊಳ್ಳಿ ಅದುವೇ ಯಶಸ್ಸಿನ ಗುಟ್ಟು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಜಿ. ಹೆಗಡೆ ಚಂದನ ಶಾಲೆ ನನಗೆ ಶೈಕ್ಷಣಿಕ ಸಲಹೆಗಾರನನ್ನಾಗಿ ಜವಾಬ್ಧಾರಿ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ .ವೃತ್ತಿ ನಂತರವೂ ನನಗೆ ಮಕ್ಕಳೊಂದಿಗೆ ಸೇರಿ ಶೈಕ್ಷಣಿಕ ಸೇವೆಯ ಕಾರ್ಯ ಮುಂದುವರೆಸುವ ಸದಾವಕಾಶ ನೀಡಿ ಗೌರವಿಸಿದ್ದಾರೆ ಎಂದು ಶ್ಲಾಘಿಸಿದರು.
ಕ್ರೀಡೆ ,ಸಾಂಸ್ಕೃತಿಕ,ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ ಮಕ್ಕಳಿಗೆ ಪಾರಿತೋಷಕ ನೀಡಿ ಮಾತನಾಡಿದ ಲೆಕ್ಕ ಪರಿಶೋಧಕರಾದ ವೇಣುಗೋಪಾಲ ಹೆಗಡೆ ಹಳ್ಳಿಯಲ್ಲಿಯೇ ನಿಜವಾದ ಪ್ರತಿಭೆಗಳಿವೆ ಅವನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಮೂಲಕ ಚಂದನ ಶಾಲೆ ರಾಜ್ಯಮಟ್ಟದ ಸ್ಪರ್ಧೆಗಳವರೆಗೆ ಬೆಳಗುತ್ತಿರುವದು ಹೆಮ್ಮೆಯ ಸಾಧನೆ ಇದಕ್ಕೆ ಆಡಳಿತ ಮಂಡಳಿಯ ಪ್ರೋತ್ಸಾಹ ,ಪಾಲಕರ ಸಹಕಾರ ,ಶಿಕ್ಷಕ ವೃಂದದ ಪರಿಶ್ರಮ ,ಸ್ಥಳೀಯರ ಸಹಕಾರ ಎಲ್ಲವೂ ಕಾರಣವಾಗಿದ್ದು ಸರ್ವರನ್ನೂ ಅಭಿನಂದಿಸುತ್ತೇನೆ ಎಂದು ಹೇಳಿ ಕಥೆಯ ಮೂಲಕ ಮಕ್ಕಳಿಗೆ ನೀತಿಯನ್ನು ತಿಳಿ ಹೇಳಿದರು.
ಮಿಯಾರ್ಡ್ಸ ಶಿರಸಿಯ ಅಧ್ಯಕ್ಷರಾದ ಎಸ್.ಆರ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿ.ಪಂ.ಸದಸ್ಯರಾದ ಶ್ರೀಮತಿ ಉಷಾ ಹೆಗಡೆ ಚಂದನ ಶಾಲೆ ನಮ್ಮ ಮನೆಯಂತೆ ಆತ್ಮೀಯ ವಾತಾವರಣ ಇಲ್ಲಿದೆ.ಅಧಿಕಾರದಲ್ಲಿಲ್ಲದಿದ್ದರೂ ನನ್ನನ್ನು ಕರೆದು ಗೌರವಿಸಿದ್ದೀರಿ ಇಂತಹ ಆದರಣಿಯ ಗುಣಗಳಿಂದಲೇ ಶಾಲೆಯ ಕೀರ್ತಿ ಬೆಳಗುತ್ತಿದೆ ಎಂದರು. ಮಾಜಿ ತಾಪಂ ಸದಸ್ಯರಾದ ರತ್ನಾ ಶೆಟ್ಟಿ ಮಾತನಾಡಿ ಮಕ್ಕಳು ಸಂಸ್ಕಾರಯುತವಾಗಿ ಬೆಳೆದು ಮುಂದೆ ಸತ್ಪ್ರಜೆಗಳಾಗಿ ರೂಪುಗೊಳ್ಳಲು ಇಂತಹ ಶಿಸ್ತಿನ ಶಿಕ್ಷಣ ಅಗತ್ಯ.ಅಚ್ಚು ಕಟ್ಟಾದ ಕಾರ್ಯಕ್ರಮ ಸಂಯೋಜಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದರು. ನರೇಬೈಲ್ ಗ್ರೂ.ಗ್ರಾ.ಸೇ.ಸ.ಸಂ ದೊಡ್ನಳ್ಳಿ ಇದರ ಅಧ್ಯಕ್ಷರಾದ ಎಸ್.ಎನ್. ಹೆಗಡೆ ದೊಡ್ನಳ್ಳಿ, ಕೆಲವೇ ವಿದ್ಯಾರ್ಥಿಗಳಿಂದ ಪ್ರಾರಂಭವಾದ ಚಂದನ ಶಾಲೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು ಅನೇಕ ಪ್ರತಿಭಾವಂತರನ್ನು ರೂಪಿಸಿದೆ ಹೀಗೆಇನ್ನಷ್ಟು ಉಜ್ವಲವಾಗಿ ಬೆಳಗಲಿ ಎಂದರು . ಚಂದನ ಪಿ ಯ ಕಾಲೇಜನ ಸಿ ಇ ಓ ಹಾಗೂ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಸಿ ಡಿ ನಾಯ್ಕ್, ಶಾಲಾ ಆಡಳಿತಾಧಕಾರಿ ಶ್ರೀಮತಿ ವಿದ್ಯಾ ನಾಯ್ಕ್, ಮುಖ್ಯೋಪಾಧ್ಯಾಯರಾದ ಸಿಂಧೂರ್ ಭಟ್ ಮತ್ತು ಶ್ರೀಮತಿ ಕಲ್ಪನಾ ಹೆಗಡೆ ,ಆಡಳಿತ ಮಂಡಳಿ ಸದಸ್ಯರು ,ಶಾಲಾ ಹಿತೈಷಿಗಳು ,ಪಾಲಕರು ,ವಿದ್ಯಾರ್ಥಿಗಳು, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಖುಷಿ ಗೌಡ ಮತ್ತು ಸಿರಿ ಜೋಷಿ ನಿರೂಪಿಸಿದರು.
ಮಿಯಾರ್ಡ್ಸ ಸದಸ್ಯರಾದ ಸತೀಶ ಹೆಗಡೆ ಗೋಳಿಕೊಪ್ಪ ವಂದಿಸಿದರು. ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾದ ಕಲ್ಪನಾ ಹೆಗಡೆ ವಾರ್ಷಿಕ ವರದಿ ವಾಚಿಸಿದರು, ಸನ್ಮಾನಿತ ವಿ.ಜಿ. ಹೆಗಡೆಯವರ ಕುರಿತು ಅವರ ಶಿಷ್ಯೆ ಹಾಗೂ ಶಿಕ್ಷಕಿ ಶ್ರೀಮತಿ ಶ್ರೀಕಲಾ ಧೀರನ್ ಅನಿಸಿಕೆ ವ್ಯಕ್ತಪಡಿಸಿದರು. ಪ್ರೌಢ ಶಾಲಾ ವಿಭಾಗದ ಮುಖ್ಯೋಪಾಧ್ಯಾಯರಾಧ ಸಿಂಧೂರ್ ಭಟ್ ದತ್ತಿನಿದಿ ಬಹುಮಾನ ವಾಚಿಸಿದರು. ಶಿಕ್ಷಕ ರವೀಂದ್ರ ಭಟ್,ಶಿಕ್ಷಕಿ ಚಂದ್ರಾವತಿ ಪೂಜಾರಿ ಸಾಂಸ್ಕೃತಿಕ ಮತ್ತು ಕ್ರೀಡಾ ವಿಭಾಗದ ವಿಜೇತ ವಿದ್ಯಾರ್ಥಿಗಳ ಯಾದಿ ವಾಚಿಸಿದರು. ಶಿಕ್ಷಕಿ ಜ್ಯೋತಿ ನಾಯ್ಕ್ ಚಂದನ ಚಿಗುರು ಪುಸ್ತಕದ ಕುರಿತು ವಿವರಣೆ ನೀಡಿದರು
ಇದೇ ಸಂದರ್ಭದಲ್ಲಿ ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶದಲ್ಲಿ ಶಿರಸಿ ತಾಲೂಕಾ ಮಟ್ಟದಲ್ಲಿ ವಿಷಯವಾರು ಹೆಚ್ಚು ಪ್ರತಿಶತ ಸಾಧಿಸಿದ ನಮ್ಮ ಚಂದನ ಶಾಲೆಯ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಮಧ್ಯಾಹ್ನ ಮಕ್ಕಳು ವಿವಿಧ ರಾಜ್ಯಗಳ ಜನಪದ ನೃತ್ಯ,ಕೋಲಾಟ ,ಭರತ ನಾಟ್ಯ,ತಬಲಾ ವಾದನ, ವೀರಗಾಸೆ, ಯೋಗ ನೃತ್ಯ, ಪಿರಾಮಿಡ್ ನೃತ್ಯ, ಸೊಂಬು ನೃತ್ಯ,ವಿದ್ಯಾರ್ಥಿಗಳಿಂದ ತಾಳ ಮದ್ದಲೆ, ಯಕ್ಷಗಾನ ಹೀಗೆ ವಿವಿಧ ರೀತಿಯ ಮನೋರಂಜನಾ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಸೇರಿದ ಸಾವಿರಾರು ಮಂದಿಯನ್ನು ರಂಜಿಸಿದರು.