ದಾಂಡೇಲಿ : ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣವಾದ ಸ್ಥಳೀಯ ಮೌಳಂಗಿ ಇಕೋ ಪಾರ್ಕ್ ಮತ್ತು ಇಕೋ ಪಾರ್ಕ್ ವ್ಯಾಪ್ತಿಯಲ್ಲಿ ಬರುವ ಕಾಳಿ ನದಿ ತೀರದಲ್ಲಿ ಇಕೋ ಪಾರ್ಕಿಗೆ ಬಂದಿದ್ದ ಪ್ರವಾಸಿಗರಿಗೆ ಮತ್ತು ಇಕೋ ಪಾರ್ಕ್ ಸಿಬ್ಬಂದಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಪಿಎಸ್ಐ ಶಿವಾನಂದ ನಾವದಗಿ ನದಿ ತೀರದಲ್ಲಿ ಮತ್ತು ನದಿಗಿಳಿಯುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸಿದರು. ಮನೋರಂಜನೆಗಾಗಿ ಸುರಕ್ಷಾ ಕವಚಗಳನ್ನು ಬಳಸದೇ ನೀರಿಗಿಳಿದಲ್ಲಿ ದುರ್ಘಟನೆ ನಡೆಯುವ ಸಾಧ್ಯತೆಯಿರುತ್ತದೆ. ಈ ನಿಟ್ಟಿನಲ್ಲಿ ನೀರು ಮತ್ತು ಬೆಂಕಿಯ ಬಗ್ಗೆ ಸಾಕಷ್ಟು ಮುನ್ನೆಚ್ಚೆರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಅದೇ ರೀತಿ ಸಂಚಾರ ನಿಯಮ, ರಸ್ತೆ ಸುರಕ್ಷತೆ, ಸೈಬರ್ ಅಪರಾಧ, ಪೊಲೀಸ್ ಸಹಾಯವಾಣಿ112 ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಎಎಸ್ಐ ವೆಂಕಟೇಶ್ ತೆಗ್ಗಿನ ಅವರು ಮಾತನಾಡಿ ವರ್ಷಾಂತ್ಯದ ದಿನಗಳಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಪ್ರವಾಸಿಗರು ಬರುತ್ತಿದ್ದು, ಇಕೋ ಪಾರ್ಕ್ ಸಿಬ್ಬಂದಿಗಳು ಪ್ರವಾಸಿಗರಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನವನ್ಬು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಪೊಲೀಸ್ ಠಾಣೆಯ ಸಿಬ್ಬಂದಿಗಳು, ಇಕೋ ಪಾರ್ಕ್ ಸಿಬ್ಬಂದಿಗಳು ಮತ್ತು ಪ್ರವಾಸಿಗರು ಉಪಸ್ಥಿತರಿದ್ದರು.