ದಾಂಡೇಲಿ : ರಾಷ್ಟ್ರದ ಸಮಗ್ರ ಅಭಿವೃದ್ಧಿಗೆ ಆರೋಗ್ಯವಂತ ಸಮಾಜ ಅತಿ ಅಗತ್ಯವಾಗಿರಬೇಕು. ಆರೋಗ್ಯವಂತ ಸಮಾಜದಿಂದ ಮಾತ್ರ ರಾಷ್ಟ್ರದ ಪ್ರಗತಿ ಸುಲಭ ಸಾಧ್ಯ ಎಂದು ವೆಸ್ಟ್ ಕೋಸ್ಟ್ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಹೇಳಿದರು.
ಅವರು ಭಾನುವಾರ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ಹುಬ್ಬಳ್ಳಿಯ ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಆಶ್ರಯದಡಿ ಕಾಗದ ಕಾರ್ಖಾನೆಯ ಆವರಣದಲ್ಲಿರುವ ಔದ್ಯೋಗಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಕಣ್ಣು, ಕಿವಿ, ಮೂಗು, ಗಂಟಲು ತಪಾಸನೆ ಹಾಗೂ ಉಚಿತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ನಾವು ನೀವೆಲ್ಲರೂ ನಮ್ಮ ನಮ್ಮ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು. ನಮ್ಮೆಲ್ಲ ಸಾಧನೆಗಳಿಗೂ ಸದೃಢ ಆರೋಗ್ಯವೇ ಮೂಲ ಕಾರಣ. ಆರೋಗ್ಯ ಸುರಕ್ಷತಾ ನಿಯಮಗಳನ್ನು ನಮ್ಮ ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿ, ಈ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕಾಗದ ಕಾರ್ಖಾನೆಯ ತಾಂತ್ರಿಕ ವಿಭಾಗದ ಅಧ್ಯಕ್ಷರಾದ ಅನೂಜ್ ತಯಾಳ್, ಕಾರ್ಖಾನೆಯ ಹಣಕಾಸು ವಿಭಾಗದ ಹಿರಿಯ ಉಪಾಧ್ಯಕ್ಷರಾದ ಅಶೋಕ ಶರ್ಮಾ, ಕಾರ್ಖಾನೆಯ ನಿರ್ವಹಣಾ ವಿಭಾಗದ ಉಪಾಧ್ಯಕ್ಷರಾದ ಭೂಪೇಂದ್ರ ಕುಮಾರ್ ಅವರು ಭಾಗವಹಿಸಿ ಶಿಬಿರಕ್ಕೆ ಶುಭ ಕೋರಿದರು.
ಜಯಪ್ರಿಯಾ ಮೆಡಿಕಲ್ ಫೌಂಡೇಶನ್ ಇದರ ಡಾ. ವೆಂಕಟರಾಮ್ ಕಟ್ಟಿ ಅವರು ಶಿಬಿರದ ಉದ್ದೇಶ ಮತ್ತು ಅಗತ್ಯತೆಯನ್ನು ವಿವರಿಸಿದರು.
ಈ ಸಂದರ್ಭದಲ್ಲಿ ಡಾ.ಭಂಡಾರಿ, ಡಾ.ಶೇಖರ ಹಂಚಿನಾಳಮಠ, ಔದ್ಯೋಗಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಜ್ಞಾನದೀಪ್ ಗಾಂವಕರ ಮತ್ತು ವೈದ್ಯರಾದ ಡಾ.ಸುಮೀತ್ ಆಗ್ನಿಹೋತ್ರಿ, ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಖಲೀಲ್ ಕುಲಕರ್ಣಿ, ಪ್ರಸಾದ್, ರಾಜು ರೋಸಯ್ಯ, ಕಾಗದ ಕಾರ್ಖಾನೆಯ ಸ್ಪೋರ್ಟ್ಸ್ & ವೆಲ್ಫೇರ್ ವಿಭಾಗದ ಬಸೀರ್ ಅಹ್ಮದ್ ಶೇಖ, ಔದ್ಯೋಗಿಕ ಆರೋಗ್ಯ ಕೇಂದ್ರದ ಚೇತನ್ ಶರ್ಮಾ, ಶಿವಲೀಲಾ, ಶಿಬಿಲಾ, ರಾಜು ಮೊದಲಾದವರು ಉಪಸ್ಥಿತರಿದ್ದರು.
ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಬಿರದಲ್ಲಿ 380 ಜನರು ಭಾಗವಹಿಸಿ, ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.