ದಾಂಡೇಲಿ : ಬಹಳ ಕುತೂಹಲ ಮೂಡಿಸಿದ ತಾಲೂಕಿನ ಪ್ರತಿಷ್ಟಿತ ಸಹಕಾರಿ ಸಂಘವಾದ ದಾಂಡೇಲಪ್ಪಾ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಸದಸ್ಯರ ಆಯ್ಕೆಗೆ ಸಂಬಂಧಿಸಿದ ಚುನಾವಣೆಯ ಮತದಾನವು ಶನಿವಾರ ನಡೆಯಿತು.
ಒಟ್ಟು 12 ಸ್ಥಾನಗಳ ಪೈಕಿ, ಈಗಾಗಲೆ 6 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ನಡೆದಿದ್ದು, ಉಳಿದ 6 ಸ್ಥಾನಗಳಿಗೆ ಮತದಾನ ನಡೆಯಿತು. 6 ಸ್ಥಾನಗಳಿಗೆ ಒಟ್ಟು 12 ಸ್ಪರ್ಧಿಗಳು ಸ್ಪರ್ಧೆಯೊಡ್ಡಿದ್ದಾರೆ. 607 ಮತದಾರರ ಪೈಕಿ ಒಟ್ಟು 575 ಮತದಾರರು ಮತ ಚಲಾಯಿಸಿದ್ದು, ಶೇ.94% ಮತದಾನವಾಗಿದೆ.
ವಿಶೇಷವಾಗಿ ತಾಲೂಕಿನ ಕೇಗದಾಳ ಗ್ರಾಮದ ಹೊಳೆವ್ವಾ ಎಂಬ ಶತಕ ದಾಟಿದ ವೃದ್ಧೆಯೊಬ್ಬರು ತನ್ನ ಸೊಸೆಯ ಸಹಾಯದೊಂದಿಗೆ ಮತ ಚಲಾಯಿಸಿ, ಮತದಾನದ ಪಾವಿತ್ರ್ಯತೆಯನ್ನು ಮೆರೆದರು.
ಹೈಕೋರ್ಟಿನ ಆದೇಶ ಬರುವವರೆಗೆ ಮತ ಎಣಿಕೆಯನ್ನು ತಡೆ ಹಿಡಿಯಲಾಗುತ್ತಿದ್ದು, ಹೈ ಕೋರ್ಟ್ ಆದೇಶ ಬಂದ ಬಳಿಕವಷ್ಟೇ ಮತ ಎಣಿಕೆ ನಡೆದು, ವಿಜೇತ ಅಭ್ಯರ್ಥಿಗಳ ಘೋಷಣೆ ನಡೆಯಲಿದೆ. ಅಲ್ಲಿಯವರೇಗೆ ಮತಪೆಟ್ಟಿಗೆಯು ಉಪ ಖಜನಾ ಕಚೇರಿಯಲ್ಲಿ ಭದ್ರವಾಗಲಿದೆ.
ಅಂಬೇವಾಡಿ ಮತ್ತು ಆಲೂರು ಗ್ರಾಮ ಪಂಚಾಯ್ತು ಅಭಿವೃದ್ಧಿ ಅಧಿಕಾರಿ ಸಂತೋಷ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ದಾಂಡೇಲಪ್ಪಾ ವಿವಿದೊದ್ದೇಶಗಳ ಪ್ರಾ. ಗ್ರಾ.ಕೃ. ಸಹಕಾರ ಸಂಘದ ಕಾರ್ಯಾಲಯದ ಸುತ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಮತದಾನ ಶಾಂತಿಯುತವಾಗಿ ನಡೆಯಿತು. ಒಟ್ಟಿನಲ್ಲಿ ಇದೇ ಮೊದಲ ಬಾರಿಗೆ ಸಹಕಾರಿ ಸಂಘದ ಚುನಾವಣೆಯು ವಿಶೇಷ ರಂಗು ಪಡೆದುಕೊಂಡಿದ್ದು, ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು.