ದಾಂಡೇಲಿ : ಕಾಶ್ಮೀರದ ಸೇನಾ ವಾಹನ ದುರಂತದಲ್ಲಿ ಹುತಾತ್ಮರಾದ ಐವರು ಯೋಧರಿಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಾಂಡೇಲಿ ತಾಲ್ಲೂಕು ಘಟಕದ ವತಿಯಿಂದ ನಗರದ ಚನ್ನಮ್ಮ ವೃತ್ತದಲ್ಲಿ ಶನಿವಾರ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು.
ಹುತಾತ್ಮರಾದ ಯೋಧರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೇಣದ ಬತ್ತಿ ಬೆಳಗಿಸಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಸ್ವಾಭಿಮಾನಿ ಬಣ ಇದರ ಮಹಿಳಾ ಘಟಕದ ಗೌರವಾಧ್ಯಕ್ಷೆ ಅನುರಾಧಾ ಜಾಧವ ಅವರು ದೇಶದ ಅಮೂಲ್ಯ ಆಸ್ತಿಗಳಾದ ಸೈನಿಕರನ್ನು ಕಳೆದುಕೊಂಡು ದೇಶ ಬಡವಾಗಿದೆ. ಮೃತರ ಕುಟುಂಬಗಳಿಗೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪ್ರದೀಪ ಶೆಟ್ಟಿ ಅವರು ಮಾತನಾಡಿ, ಈ ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯಿಂದ ಬದುಕಲು ಮೂಲ ಕಾರಣ ಈ ದೇಶದ ಗಡಿಯನ್ನು ಕಾಯುತ್ತಿರುವ ಸೈನಿಕರು. ನಮ್ಮ ದೇಶದ ಸೈನಿಕರನ್ನು ಹಾಗೂ ಸೈನಿಕರ ಕುಟುಂಬದವರನ್ನು ಸದಾ ಗೌರವಿಸುವ ಸಂಸ್ಕೃತಿಯನ್ನು ನಾವು ನೀವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿ, ಹುತಾತ್ಮರಾದ ವೀರ ಯೋಧರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಮಹಿಳಾ ಘಟಕದ ಉಪಾಧ್ಯಕ್ಷೆ ಶೈಲಾ ರವಿ ಸುತಾರ, ಸದಸ್ಯರಾದ ರೈಸಾ ಮುಲ್ಲಾ, ಲಕ್ಷ್ಮೀ ಭೋವಿ, ಉಜ್ವಲಾ ಗಾವಡೆ, ಮಂಜುಳಾ ಬಳೆಗಾರ, ರಾಧಾ ದೊಡ್ಮನಿ, ಸುಮಿತ್ರಾ ಲಮಾಣಿ, ಸ್ಮಿತಾ ತೆಂಗಿನಮಠ, ಮಾಯಾ ಗಾವಡಾ, ಸಾಯಿಶ್ರೀ ಬೋರ್ಕರ್ ಮೊದಲಾದವರು ಉಪಸ್ಥಿತರಿದ್ದರು.