ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಡಿ.30ರಂದು ನಡೆಯಬೇಕಿದ್ದ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾಜಿ ಪ್ರಧಾನ ಮಂತ್ರಿ ಡಾ.ಮನಮೋಹನ ಸಿಂಗ್ ನಿಧನದ ಕಾರಣ ಸರ್ಕಾರದ ಅಧಿಸೂಚನೆ ಮೇರೆಗೆ ಮುಂದೂಡಲಾಗಿದ್ದು ಸಮ್ಮೇಳನವು ಜ.8ರಂದು ಸಿದ್ದಾಪುರದ ಶಂಕರಮಠದಲ್ಲಿಯೇ ನಡೆಯಲಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ತಾಲೂಕು ಕಸಾಪ ಅಧ್ಯಕ್ಷ ಹಾಗೂ ಸಮ್ಮೇಳನ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋಪಾಲ ನಾಯ್ಕ ಅವರು ಸಮ್ಮೇಳನದ ಕುರಿತು ಶಾಸಕ ಭೀಮಣ್ಣ ನಾಯ್ಕ ಅವರನ್ನು ಭೇಟಿ ಮಾಡಿ ಸಮ್ಮೇಳನದ ಬದಲಾವಣೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಅಲ್ಲದೇ ಆಮಂತ್ರಣ ಪತ್ರಿಕೆ ನೀಡಿ ಸ್ವಾಗತಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್ ಇದ್ದರು.