ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವ
ಹೊನ್ನಾವರ : ಆರ್ಟಿಐ ಮಾಹಿತಿ ಕೇಳಿದ್ದಾರೆ ಎಂದು ಅದೇ ಕಾರಣವಿಟ್ಟುಕೊಂಡು ಜನರಿಗೆ ಕೆಲಸ ಮಾಡಿಕೊಡದೆ ತೊಂದರೆ ಕೊಡಬೇಡಿ, ಮಾಹಿತಿ ಕೇಳಿದವರಿಗೆ ಕಾಲಮಿತಿಯೊಳಗೆ ಸಮರ್ಪಕ ಉತ್ತರ ನೀಡಿ. ಪಾರ್ಕಿಂಗ್ ಕಾರಣಕ್ಕೆ ವ್ಯಾಪಾರಸ್ಥರಿಗೆ, ಕಟ್ಟಡ ಮಾಲೀಕರಿಗೆ ತೊಂದರೆ ನೀಡಬೇಡಿ ಎಂದು ಪ.ಪಂ. ಮುಖ್ಯಾಧಿಕಾರಿಗೆ ಸಚಿವ ಮಂಕಾಳ್ ವೈದ್ಯರು ಸೂಚಿಸಿದರು.
ಅವರು ತಾಲೂಕಾ ಪಂಚಾಯತ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯ ಇಲಾಖೆಯ ಚರ್ಚೆಯಲ್ಲಿ ಟಿಬಿ ತಪಾಸಣಾ ಶಿಬಿರ ನಡೆಸಲಾಗುತ್ತಿದೆ ಎಂದು ಇಲಾಖೆಯಲ್ಲಿನ ಕಾರ್ಯಚಟುವಟಿಕೆ ಕುರಿತು ತಾಲೂಕಾ ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ ತಿಳಿಸಿದರು. ಇದು ಒಂದು ದಿನಕ್ಕೆ ಸಿಮೀತವಾಗದೇ ನಿರಂತರವಾಗಿರಿಸಿ ಎಂದು ಸಚಿವರು ಸಲಹೆ ನೀಡಿದರು.
ಕೆ.ಎಫ್.ಡಿ ಇಲಾಖೆಯ ಚರ್ಚೆಯಡಿ ಮಂಗನ ಕಾಯಿಲೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಿ, ಎಂಡೊಸಲ್ಪಾನ್ ಪೀಡಿತರ ಪಟ್ಟಿ ಆದಷ್ಟು ಶೀಘ್ರವಾಗಿ ಸಿದ್ದಪಡಿಸಿ, ಅವರಿಗೆ ಮಾನವೀಯತೆ ತೋರಿ,ಅವರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದರು.
ಶಿಕ್ಷಣ ಇಲಾಖೆ ಚರ್ಚೆಯಲ್ಲಿ 32 ಶಾಲೆಗಳಿಗೆ ಮಣ್ಣಿನ ಗೋಡೆ ಇದ್ದು, 51ಶಾಲೆಗಳಿಗೆ ಕೊಠಡಿ ಅವಶ್ಯಕತೆ. ಶಿಕ್ಷಕರ ವೈದ್ಯಕೀಯ ವೆಚ್ಚ 50ಲಕ್ಷ ಬಾಕಿ ಉಳಿದಿದೆ ಎಂದು ಬಿಇಒ ಜಿಎಸ್ ನಾಯ್ಕ ಸಭೆಯಲ್ಲಿ ಹೇಳಿದರು. ಪ್ರಸಕ್ತ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ 100ಕ್ಕೆ 100ರಷ್ಟಾಗಬೇಕು. ಶಿಕ್ಷಣ,ಆರೋಗ್ಯಕ್ಕೆ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಿ ಎಂದು ಸಚಿವರು ಸೂಚಿಸಿದರು.
ಜಿಲ್ಲಾ ಪಂಚಾಯತ ಇಲಾಖೆ ಚರ್ಚೆಯಲ್ಲಿ, ಅಂಗನವಾಡಿ, ಶಾಲೆ ಕಟ್ಟಡಗಳ ಕಾಮಗಾರಿ ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಸಚಿವರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು. ಕುಡಿಯುವ ನೀರಿನ ಚರ್ಚೆಯಲ್ಲಿ, ಈ ಬಾರಿ ಟ್ಯಾಂಕರ್ ನಲ್ಲಿ ನೀರು ಕೊಡುವ ಪರಿಸ್ಥಿತಿ ಇರಬಾರದು. ಜೆಜೆಎಮ್ ಕಾಮಗಾರಿ ಮಾರ್ಚ ಅಂತ್ಯದೊಳಗೆ ಮುಗಿಸಬೇಕೆಂದು ತಾಕೀತು ಮಾಡಿದರು.
ಹೆಸ್ಕಾಂ ಇಲಾಖೆ ಚರ್ಚೆಯಲ್ಲಿ,ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿದ್ದಲ್ಲಿ ಅವನ್ನು ಹುಡುಕಿ ವಿದ್ಯುತ್ ಸಂಪರ್ಕ ನೀಡುವ ಕೆಲಸ ಆಗಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಮಂಕಿ ಕಾಳಜಿಕೇಂದ್ರದ ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರು. ಸಚಿವರು ಸಂಬಂಧಪಟ್ಟ ಇಲಾಖೆಗೆ ಬಿಲ್ ಪಾವತಿಸುವಂತೆ ಸೂಚಿಸಿ, ಯಾವುದೇ ಇಲಾಖೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಕೂಡದು. ಬಿಲ್ ಬಾಕಿ ಇದ್ದಲ್ಲಿ ನನ್ನ ಗಮನಕ್ಕೆ ತನ್ನಿ ಎಂದರು.
ಅರಣ್ಯ ಇಲಾಖೆ ಚರ್ಚೆಯಲ್ಲಿ ರಸ್ತೆ,ಸೇತುವೆ,ಅಂಗನವಾಡಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕೆ ತೊಂದರೆ ನೀಡಬೇಡಿ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಲೆ ಮತ್ತು ಅಂಗನವಾಡಿ, ಸರ್ಕಾರಿ ಕಚೇರಿಗಳ ಆವಾರದಲ್ಲಿ ಆದಷ್ಟು ಹಣ್ಣಿನ ಗಿಡ ನೆಡುವ ಕೆಲಸ ಮಾಡಿ ಎಂದರು.
ಸರ್ವೆ ಇಲಾಖೆ ಚರ್ಚೆಯಲ್ಲಿ ,ಸರ್ವೆ ಕೆಲಸಕ್ಕೆ ವಿಳಂಬ ಮಾಡಬೇಡಿ.ತಾಲೂಕಿನಲ್ಲಿ800ಕ್ಕು ಅಧಿಕ ಜನರ ಸರ್ವೆ ಬಾಕಿ ಇದೆ.ಪ್ರತಿಯೊಂದು ಅರ್ಜಿಯ 10ದಿನದೊಳಗೆ ಪೂರ್ಣಗೊಳಿಸಬೇಕೆಂದರು. ಕೃಷಿ ಇಲಾಖೆ, ಪಶುಸಂಗೋಪನೆ, ಪೊಲೀಸ್, ಸಾರಿಗೆ, ಅಬಕಾರಿ, ಬಂದರು ಇಲಾಖೆ ಸೇರಿದಂತೆ ವಿವಿಧ ಇಲಾಖೆ ಚರ್ಚೆ ನಡೆಯಿತು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗಧಿಕಾರಿಗಳಾದ ಡಾ.ನಯನಾ ಎಸ್, ಜಿ.ಪಂ.ಯೋಜನಾಧಿಕಾರಿಗಳು ವಿನೋಧ ಅಣ್ವೇಕರ್, ತಹಶೀಲ್ದಾರ ಪ್ರವೀಣ ಕರಾಂಡೆ, ತಾಲೂಕಾ ಪಂಚಾಯತ ಇ.ಓ ಚೇತನಕುಮಾರ್ ಉಪಸ್ಥಿತರಿದ್ದರು.
ಜನರಿಂದ ದೂರು ಬರದ ಹಾಗೆ ನೋಡಿಕೊಳ್ಳಿ, ಯಾರೇ ತಪ್ಪು ಮಾಡಿದರು ಸುಮ್ಮನೆ ಇರಿವುದಿಲ್ಲ. ನೀವು ತಪ್ಪು ಮಾಡದೇ ಇದ್ದಲ್ಲಿ, ನಿಮಗೆ ಯಾವ ತೊಂದರೆ ಆಗುವುದಿಲ್ಲ. ನಿಮ್ಮ ಜೊತೆ ನಾನು ಇದ್ದೇನೆ. ಗ್ರಾಮ ಸಭೆಗೆ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹೋಗಬೇಕು. ಹೋಗದೆ ಇರುವ ಅಧಿಕಾರಿಗಳ ಪಟ್ಟಿ ಕೊಡಿ.–
ಮಂಕಾಳ್ ವೈದ್ಯ
ಜಿಲ್ಲಾ ಉಸ್ತುವಾರಿ ಸಚಿವರು