ಶಿರಸಿ: ತಾಲೂಕಿನ ಯಡಳ್ಳಿ ಗ್ರಾಮದಲ್ಲಿ ಇಕೋ ಕೇರ್ ಸಂಸ್ಥೆ, ಶಿರಸಿ ಹಾಗೂ ಅಘನಾಶಿನಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ, ಯಡಳ್ಳಿ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿಮೋಚನಾ ದಿನಾಚರಣೆಯ ಅಂಗವಾಗಿ ಡಿ.18ರಂದು ಲಿಂಗತ್ವಾಧಾರಿತ ದೌರ್ಜನ್ಯ ವಿಮೋಚನಾ ಅಭಿಯಾನವನ್ನು ಯಡಳ್ಳಿಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಏರ್ಪಡಿಸಲಾಗಿತ್ತು.
ಉದ್ಘಾಟನೆಯನ್ನು ಯಡಳ್ಳಿ ಗ್ರಾಮ ಪಂಚಾಯತ್‌ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜಾರಾಮ್ ಟಿ. ಭಟ್ ನೆರವೇರಿಸಿ ಅಭಿಯಾನದ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಜ್ಯೋತಿ ಸಿ. ನಾಯ್ಕ್, ಇಕೋ ಕೇರ್ ಸಂಸ್ಥೆಯ ಅಧ್ಯಕ್ಷ ಸುನೀಲ್ ಭೋವಿ, ಉಪಾಧ್ಯಕ್ಷ ಪುಂಡಲೀಕ್ ಜಿ. ಶಿರಸಿಕರ್ ಉಪಸ್ಥಿತರಿದ್ದು ಲಿಂಗತ್ವ ದೌರ್ಜನ್ಯ ನಿರ್ಮೂಲನೆ ಕುರಿತು ಮಾತನಾಡಿದರು. ಸ್ವ ಸಹಾಯ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಹಾಗೂ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಿ ಇಕೋ ಕೇರ್ ಸಂಸ್ಥೆ ವತಿಯಿಂದ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ನಂತರ ಲಿಂಗತ್ವಾಧಾರಿತ ಮಹಿಳಾ ದೌರ್ಜನ್ಯ ವಿಮೋಚನಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ಎಂಬಿಕೆ ಚಂದ್ರಕಲಾ ನಾಯಕ್, ಪದಾಧಿಕಾರಿಗಳು, ವಲಯ ಮೇಲ್ವಿಚಾರಕರು, ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.