Slide
Slide
Slide
previous arrow
next arrow

ಹೆರಿಗೆ ವೈದ್ಯರಿಲ್ಲದ ಹೊನ್ನಾವರ ತಾಲೂಕಾಸ್ಪತ್ರೆ: ಸೂರಜ್ ಸೋನಿ ಬೇಸರ

300x250 AD

ಹೊನ್ನಾವರ : ತಾಲೂಕಾಸ್ಪತ್ರೆಯಲ್ಲಿ ಹೆರಿಗೆ ವೈದ್ಯರ ನಿವೃತ್ತಿ ನಂತರ ಬೇರೆ ವೈದ್ಯರ ನೇಮಕವಾಗದಿರುವ ಬಗ್ಗೆ ಜನಪ್ರತಿನಿಧಿಗಳ ಹಾಗೂ ಸರ್ಕಾರದ ನಿರ್ಲಕ್ಷ್ಯದ ಕುರಿತು ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ಬೇಸರ ವ್ಯಕ್ತಪಡಿಸಿದರು.

ಅವರು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಉಕ್ಕು ಮತ್ತು ಬೃಹತ್‌ ಕೈಗಾರಿಕೆ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರ 65ನೇ ವರ್ಷದ ಜನ್ಮದಿನಾಚರಣೆ ಹಿನ್ನಲೆ ಜೆಡಿಎಸ್ ಹೊನ್ನಾವರ ತಾಲೂಕಾ ಘಟಕದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ರೋಗಿಗಳ ಆರೋಗ್ಯ ಕುಶಲೋಪರಿ ವಿಚಾರಿಸಿ ನಂತರ ಮಾತನಾಡಿದರು.

ಡಿಎಚ್ಒ ಅವರಿಗೆ ಕರೆಮಾಡಿ ಆಸ್ಪತ್ರೆಗೆ ಕೂಡಲೇ ಹೆರಿಗೆ ವೈದ್ಯರ ನೇಮಕವಾಗಬೇಕು ಅಥವಾ ತಾತ್ಕಾಲಿಕವಾಗಿಯಾದರೂ ನಿವೃತ್ತಿಯಾದ ವೈದ್ಯರ ಸೇವೆ ಪಡೆಯಲು ಕ್ರಮಕೈಗೊಳ್ಳಲು ವಿನಂತಿಸಿದರು.

ಜೆಡಿಎಸ್ ತಾಲೂಕಾಧ್ಯಕ್ಷ ಟಿ.ಟಿ ನಾಯ್ಕ ಮಾತನಾಡಿ, ಕಳೆದ ವರ್ಷ ಕುಮಾರಸ್ವಾಮಿಯವರ ಹುಟ್ಟುಹಬ್ಬ ಆಚರಣೆಗೆ ಆಸ್ಪತ್ರೆಗೆ ಬಂದಾಗ 150 ರೋಗಿಗಳಿದ್ದರು ,ಈ ವರ್ಷ 20 ರೋಗಿಗಳಿದ್ದಾರೆ. ಇದಕ್ಕೆ ಕಾರಣ ತಿಳಿದಾಗ ಇಲ್ಲಿನ ಕೆಲವು ವಿಭಾಗಕ್ಕೆ ವೈದ್ಯರ ಕೊರತೆ ಇದ್ದು,ಇನ್ನು ನೇಮಕವಾಗದ ಕಾರಣ ರೋಗಿಗಳ ಕೊರತೆಯಾಗಿದೆ ಎನ್ನುವ ಮಾಹಿತಿ ತಿಳಿದಿದೆ.ಸರ್ಕಾರಿ ಆಸ್ಪತ್ರೆಗೆ ಬರುವವರು ಬಹುತೇಕ ಬಡವರೆ ಆಗಿರುವುದರಿಂದ ಅವರಿಗೆ ಎಲ್ಲಾ ಸೌಲಭ್ಯವಾಗಲು ಕ್ರಮ ಕೈಗೊಳ್ಳಬೇಕು ಎಂದರು.

300x250 AD

ಈ ವೇಳೆ ತಾಲೂಕಾಸ್ಪತ್ರೆಯ ಡಾ.ಪ್ರಕಾಶ ನಾಯ್ಕ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಸೂರಜ್ ಸೋನಿ ಮಾಧ್ಯಮದವರೊಂದಿಗೆ ಮಾತನಾಡಿ, ಕುಮಾರಸ್ವಾಮಿಯವರು ಶಿರೂರು ಘಟನೆಯಲ್ಲಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳುವ ಜತೆಗೆ ಕೃತಿಕಾ ಅವರಿಗೆ ಬಿಎಚ್ಇಎಲ್‌ನಲ್ಲಿ ಉದ್ಯೋಗ ಒದಗಿಸುವ ಮೂಲಕ ತಾವು ಎಂತಹ ಕರುಣಾಮಯಿ ಎನ್ನುವುದು ತೋರಿಸಿಕೊಟ್ಟಿದ್ದಾರೆ. ಅವರ ಹುಟ್ಟುಹಬ್ಬವನ್ನು ರೋಗಿಗಳಿಗೆ ಹಣ್ಣುಹಂಪಲು ಹಂಚುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಗಿದೆ ಎಂದರು. ಶೀಘ್ರದಲ್ಲೇ ವೈದ್ಯರ ನೇಮಕ ಮಾಡಬೇಕು, ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಆಸ್ಪತ್ರೆ ಎದುರು ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.

ಆಸ್ಪತ್ರೆಯ ಮೂರನೇ ಮಾಳಿಗೆಯಲ್ಲಿ ಡಯಾಲಿಸಿಸ್ ಘಟಕ ಇರುವುದರಿಂದ ರೋಗಿಗಳಿಗೆ ಅಲ್ಲಿಗೆ ತಲುಪಲು ಲಿಪ್ಟ್ ವ್ಯವಸ್ಥೆ ಇಲ್ಲ. ಮೊದಲೇ ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ ಆಸ್ಪತ್ರೆಗೆ ಬಂದಾಗ ಇನ್ನಷ್ಟು ಕಷ್ಟವಾಗಬಾರದು. ಲಿಫ್ಟ್ ವ್ಯವಸ್ಥೆಯು ಆಗಬೇಕು ಎಂದರು.

Share This
300x250 AD
300x250 AD
300x250 AD
Back to top