ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಶಾಸಕ ಶಿವರಾಮ ಹೆಬ್ಬಾರ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿ ಜಿ.ಎನ್.ಭಟ್ಟ ತಟ್ಟಿಗದ್ದೆ, ವಿಕಾಸ ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಇದ್ದರು.
ಕಾರ್ಶೆಡ್ನಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ:
ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಯನ್ನು ಶಾಸಕ ಶಿವರಾಮ ಹೆಬ್ಬಾರ್ ನಿವಾಸದ ಕಾರ್ಶೆಡ್.ನಲ್ಲಿ ಮಾಡಿಸಿರುವ ಕಸಾಪ ಪದಾಧಿಕಾರಿಗಳ ನಡೆಗೆ ಕಸಾಪ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಶಾಸಕರಿಂದಲೇ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿಸುವುದಾದರೂ, ಕಾರ್ಶೆಡ್ನಲ್ಲಿ ಮಾಡಿಸಿದ್ದೇಕೆ ಎಂಬ ಪ್ರಶ್ನೆ ಕೇಳಿ ಬಂದಿದೆ.
ತಾಲೂಕಿನಲ್ಲಿ ಎರಡು ವರ್ಷಗಳ ನಂತರ ಸಮ್ಮೇಳನ ನಡೆಯುತ್ತಿದೆ. ತಾಲೂಕಿನ ಕನ್ನಡ ಹಬ್ಬದ ಆಮಂತ್ರಣ ಪತ್ರಿಕೆಯನ್ನು ಕನ್ನಡ ಸಾಹಿತ್ಯ ಭವನದಲ್ಲೇ ಬಿಡುಗಡೆ ಮಾಡಿಸಬಹುದಿತ್ತು. ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ತಹಸೀಲ್ದಾರರ ಕಚೇರಿಯಲ್ಲಾದರೂ ಮಾಡಬಹುದಿತ್ತು. ಅದನ್ನು ಬಿಟ್ಟು ಶಾಸಕರ ಕಾರ್ಶೆಡ್ ಸೂಕ್ತ ಸ್ಥಳ ಎನ್ನಿಸಿದ್ದಾದರೂ ಹೇಗೆ ಎಂಬ ಚರ್ಚೆ ನಡೆಯುತ್ತಿದೆ.
ಈ ಬಾರಿ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ರಾಮಕೃಷ್ಣ ಭಟ್ಟ ದುಂಡಿ ಅವರು ರಂಗಭೂಮಿ ಕ್ಷೇತ್ರದಲ್ಲಿ ಸಾಧಕರು. ಚಿಂತಕರು, ಸಹಕಾರಿಗಳೂ ಹೌದು. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರಲ್ಲ. ಯಲ್ಲಾಪುರದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಅನೇಕರಿದ್ದರೂ, ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳದವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಯಲ್ಲಾಪುರದಲ್ಲೇ ಹುಟ್ಟಿ, ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರು ಹಲವರಿದ್ದಾರೆ. ಯಲ್ಲಾಪುರದಲ್ಲಿ ಹುಟ್ಟಿ ಬೇರೆ ಊರುಗಳಿಗೆ ಹೋಗಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರೂ ಅನೇಕರಿದ್ದಾರೆ. ಬೇರೆ ಊರುಗಳಿಂದ ಯಲ್ಲಾಪುರಕ್ಕೆ ಬಂದು ನೆಲೆಸಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿದ್ದಾರೆ. ಎಲ್ಲರೂ ಇದ್ದಾಗಲೂ ಅವರನ್ನು ನಿರ್ಲಕ್ಷಿಸಿದ್ದೇಕೆ ಎಂಬ ಚರ್ಚೆ ಸಾಹಿತ್ಯ ವಲಯದಲ್ಲಿ ಕೇಳಿ ಬರುತ್ತಿದೆ.