ಹೊನ್ನಾವರ :ಜೀವನದಲ್ಲಿ ನಿಶ್ಚಿತ ಗುರಿ ಇರಬೇಕು. ನಿರ್ದಿಷ್ಟ ಗುರಿ ಹಾಗೂ ದೃಢ ಮನಸ್ಸು ಅತ್ಯಂತ ಮಹತ್ವದ್ದಾಗಿದೆ. ನಿರಂತರ ಪ್ರಯತ್ನ ಇದ್ದರೆ ಅಸಾಧ್ಯ ಅನ್ನುವುದು ಯಾವುದು ಇಲ್ಲ. ಒಳ್ಳೆಯ ಗುಣವನ್ನು ಬೆಳೆಸಿಕೊಳ್ಳಿ. ಸಮಾಜಕ್ಕೆ ಒಳ್ಳೆಯ ಕೊಡುಗೆಯನ್ನು ನೀಡುವ ಇಚ್ಛಾಶಕ್ತಿ ಬೆಳೆಸಿಕೊಳ್ಳಿ ಎಂದು ಡಿಎಫ್ಒ ಯೋಗಿಶ್ ಸಿ.ಕೆ. ಹೇಳಿದರು.
ಪಟ್ಟಣದ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಶೈಕ್ಷಣಿಕ ಗುಣಮಟ್ಟ ಸುಧಾರಿಸಿ ಧನಾತ್ಮಕ ಬದಲಾವಣೆ ತರುವಲ್ಲಿ ಈ ಸಂಸ್ಥೆ ಪಾತ್ರ ದೊಡ್ಡದು. ಜನರಿಗೆ ಸೌಲಭ್ಯದ ಕೊರತೆಯಿಲ್ಲ. ಆದರೆ ಮಾನಸಿಕವಾಗಿ ಬದ್ಧರಾಗಿಲ್ಲ. ಭಾರತ ಯುವಜನತೆಯಿಂದ ಕೂಡಿದೆ. ಯುವಜನತೆ ತಮ್ಮ ಶಕ್ತಿಯನ್ನು ತೋರಿಸಬೇಕು ಎಂದರು.
ಮುಖ್ಯ ಅತಿಥಿ ಪರಿಸರ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿವೃತ್ತ ಅಧಿಕಾರಿ ಶ್ರೀಮತಿ ವಿಜಯಾ ಹೆಗಡೆ ಮಾತನಾಡಿ ಶುದ್ಧ ಮನಸ್ಸು ,ಪ್ರಾಮಾಣಿಕತೆ , ಕಠಿಣ ಪರಿಶ್ರಮ ಜೀವನಕ್ಕೆ ಅತಿ ಮುಖ್ಯ. ಮಕ್ಕಳು ಈಗ ತುಂಬಾ ಬದಲಾಗಿದ್ದಾರೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವಿದ್ದೇವೆ. ಬಹುಮುಖ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಉತ್ತಮ ಮಾನಸಿಕತೆ ಹಾಗೂ ದೊಡ್ಡ ದೊಡ್ಡ ಕನಸುಗಳಿರಬೇಕು. ಎಲ್ಲಾ ಸೌಲಭ್ಯವನ್ನು ಹೊಂದಿರುವ ನಾವು ಸಾಧನೆ ಮಾಡುವ ಇಚ್ಛೆಯನ್ನು ಹೊಂದಿರಬೇಕು. ದೇವರ ಮೇಲೆ ಕೃತಜ್ಞತೆಯನ್ನು ಹೊಂದಬೇಕು. ವಿದ್ಯಾರ್ಥಿಗಳು ಯಾವೆಲ್ಲಾ ಒಳ್ಳೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂಬ ಅಂಶವನ್ನು ತಿಳಿಸುತ್ತಾ , ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನು ನಿರ್ಮಿಸುವ ಕೈಂಕರ್ಯಕ್ಕೆ ಕೈಜೋಡಿಸುವ ಕೆಲಸ ಮಾಡಿ ಎಂದು ಕರೆಕೊಟ್ಟರು.
ಪದವಿ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಎಲ್.ಹೆಬ್ಬಾರ ಮಾತನಾಡಿ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.ಇದೇ ವೇಳೆ ಹಾವೇರಿ ಜಾನಪದ ವಿ.ವಿ.ಯಿಂದ ಗೌರವ ಡಾಕ್ಟರೇಟ್ ಪಡೆದ ಶಾಂತಿ ನಾಯಕ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೃಷ್ಣಮೂರ್ತಿ ಭಟ್,ಶಿವಾನಿ ಮಾತನಾಡಿ ಸನ್ಮಾನಗಳು ನಮ್ಮನ್ನು ಪ್ರೇರೆಪಿಸಲು ಹಾಗೂ ವಿದ್ಯಾರ್ಥಿಗಳನ್ನು ಪ್ರೇರೆಪಿಸಲು ಮಾಡುವುದಾಗಿದೆ. ನಮ್ಮ ಬದುಕು ಆಲದ ಮರದಂತೆ ನೆರಳನ್ನು ಕೊಡುವಂತಾಗಬೇಕು. ನಮ್ಮ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ಕೊಡುವಂತಾಗಬೇಕು. ಪೂರ್ವ ವಿದ್ಯಾರ್ಥಿಗಳು ಸಂಸ್ಥೆಯನ್ನು ಉತ್ತುಂಗಕ್ಕೆ ಏರಿಸಲು ಕಟಿಬದ್ಧರಾಗಬೇಕು. ಮೂರು ತಲೆಮಾರಿಗೆ ಶಿಕ್ಷಣವನ್ನು ನೀಡುತ್ತಿರುವ ಕಾಲೇಜು ಎಸ್.ಡಿ.ಎಮ್.ಕಾಲೇಜಾಗಿದೆ ಎಂದರು.
ಈ ಸಂದರ್ಭದಲ್ಲಿ ಶೈಕ್ಷಣಿಕ , ಸಾಂಸ್ಕ್ರತಿಕ , ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್. ಭಟ್ ಸ್ವಾಗತಿಸಿದರು. ವಿನಾಯಕ್ ಭಟ್ ಅತಿಥಿ ಗಳನ್ನು ಪರಿಚಯಿಸಿದರು. ಇಂಚರಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕಿಯರಾದ ಹೇಮಾ ಭಟ್ ಹಾಗೂ ಕಾವೇರಿ ಮೇಸ್ತ ನಿರೂಪಿಸಿದರು. ಉಪನ್ಯಾಸಕ ನಿಜಲಿಂಗಪ್ಪ ಎಚ್ ವಂದಿಸಿದರು.