ಶಿರಸಿ: ತಾಲೂಕಿನ ವಾನಳ್ಳಿಯ ಸಮರ್ಪಣಾ ಕಲಾಬಳಗ, ಯಕ್ಷಸಿರಿ ಯಕ್ಷಗಾನ ಮತ್ತು ಮೆಣಸಿಯ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಡಿ.10 ರಂದು ತಾಲೂಕಿನ ವಾನಳ್ಳಿಯ ಗಜಾನನ ಮಾಧ್ಯಮಿಕ ಶಾಲೆಯ ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಾಷಣ ಸ್ಪರ್ಧೆ, ಹಿರಿಯ ನಾಟಕ ಕಲಾವಿದರಿಗೆ ಸನ್ಮಾನ ಹಾಗೂ ಸಂಗೀತಮಯ ನಾಟಕ ಪ್ರದರ್ಶನ ಜರುಗಲಿದೆ.
ಅಂದು ಸಂಜೆ 7ಘಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಸ್ಕೋಡ್‌ವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ ಉದ್ಘಾಟಿಸಲಿದ್ದು, ಮೆಣಸಿ ಸೊಸೈಟಿ ಅಧ್ಯಕ್ಷ ಎನ್.ಎಸ್.ಹೆಡಗೆ ಕೋಟಿಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ, ಸಮರ್ಪಣಾ ಕಲಾಬಳಗದ ಅಧ್ಯಕ್ಷ ಮೋಹನ ಭಟ್ಟ ಜುಮ್ಮನಕಾನು, ಗೌರವಾಧ್ಯಕ್ಷ ಪಿ.ಜಿ.ಹೆಗಡೆ ಮಂಡೇಮನೆ, ವಾನಳ್ಳಿ ಗ್ರಾಪಂ ಅಧ್ಯಕ್ಷೆ ವೀಣಾ ಗೌಡ, ಕೊಡ್ನಗದ್ದೆ ಗ್ರಾಪಂ ಅಧ್ಯಕ್ಷ ರಾಘವೇಂದ್ರ ಹೆಗಡೆ, ವಾನಳ್ಳಿ ಗ್ರಾಪಂ ಉಪಾಧ್ಯಕ್ಷ ಜಯರಾಮ ಹೆಗಡೆ, ಕೊಡ್ನಗದ್ದೆ ಗ್ರಾಪಂ ಉಪಾಧ್ಯಕ್ಷೆ ರಾಜೇಶ್ವರಿ ಭಟ್ಟ ಪಾಲ್ಗೊಳ್ಳಲಿದ್ದಾರೆ.
ಜನಸಾಮಾನ್ಯರಲ್ಲಿ ಆರೋಗ್ಯದ ಬಗ್ಗೆ ಕಾಳಜಿ, ಹಬ್ಬ-ಹರಿದಿನಗಳಲ್ಲಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಆದ ಬದಲಾವಣೆ, ಶಿರಸಿಗೆ ಪ್ರತ್ಯೇಕ ಜಿಲ್ಲೆ ಅವಶ್ಯಕವೇ?, ದೇವರಲ್ಲಿ ಜನರು ನಂಬಿಕೆ ಕಳೆದುಕೊಂಡಿದ್ದಾರೆಯೇ?, ಅವಿಭಕ್ತ ಕುಟುಂಬಗಳ ನಿರ್ವಹಣೆ, ಸಾಮಾಜಿಕ ಸ್ವಾಸ್ತ್ಯ ಕಾಪಾಡುವಲ್ಲಿ ಯುವಕ, ಯುವತಿಯರ ಪಾತ್ರ ವಿಷಯದ ಕುರಿತು ಮಧ್ಯಾಹ್ನ ೪ ಘಂಟೆಯಿಂದ ಶಾಲಾ ಮಕ್ಕಳಿಗೆ, ಮಹಿಳೆ ಮತ್ತು ಪುರುಷರಿಗೆ ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಸಂಜೆ 5 ಗಂಟೆಯಿಂದ ಊರಿನ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 8.45 ಗಂಟೆಯಿಂದ ಮಾರುತಿ ಬಾಡಕರ್ ಕಾರವಾರ ವಿರಚಿತ “ನಟ ಸಾಮ್ರಾಟ್” ಅರ್ಥಾತ್ ‘ಅಣ್ಣ ಕೊಟ್ಟ ಉಡುಗೊರೆ’ ಸಾಮಾಜಿಕ ನಾಟಕ ಆರಂಭಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಘಟಕರು ವಿನಂತಿಸಿದ್ದಾರೆ.