ಶಿರಸಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ಕಚೇರಿಯ ಆವರಣದಲ್ಲಿ ಕನ್ನಡ ಕ್ರಿಯಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ದ್ವಿಭಾಷಾ ಸಾಹಿತಿ ಜಗದೀಶ್ ನಾ. ಭಂಡಾರಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ತಮ್ಮ ಕೆಲಸದ ಒತ್ತಡದ ನಡುವೆಯೂ ಇಷ್ಟು ಅರ್ಥಪೂರ್ಣವಾಗಿ ಕನ್ನಡ ನುಡಿ ಹಬ್ಬವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಕದಂಬ ಕಲಾವೇದಿಕೆ ಅಧ್ಯಕ್ಷ ಕದಂಬ ರತ್ನಾಕರ್ ಮತ್ತು ಜೀ ಸರಿಗಮಪ ಖ್ಯಾತಿಯ ಯುವಪ್ರತಿಭೆ ಕುಮಾರ್ ಪ್ರವೀಣ್ ಶೇಟ್ ಇವರನ್ನು ಅಭಿನಂದಿಸಲಾಯಿತು. ಕದಂಬ ಕಲಾ ವೇದಿಕೆ ಕಲಾವಿದರು, ಕುಮಾರ್ ಪ್ರವೀಣ್ ಶೇಟ್ ಮತ್ತು ಸಂಸ್ಥೆಯ ಸಿಬ್ಬಂದಿಗಳಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು. ಸ್ಮಾರ್ಟ್ ಡ್ಯಾನ್ಸ್ ಅಕಾಡೆಮಿ ಕಲಾವಿದರು ಮತ್ತು ಸಂಸ್ಥೆಯ ಸಿಬ್ಬಂದಿಗಳ ಮಕ್ಕಳಿಂದ ನೃತ್ಯ ಕಾರ್ಯಕ್ರಮ ಜರುಗಿತು. ಬಾಲ ಪ್ರತಿಭೆ ಮಾಸ್ಟರ್ ಅದ್ವೈತ ಕಿರಣ್ ಕುಮಾರ್ ಇವರಿಂದ ‘ಗಾಂಧಾರಿ ವಿದ್ಯೆ’ ಪ್ರದರ್ಶನ ವಿಶೇಷ ಆಕರ್ಷಣೆಯಾಗಿತ್ತು. ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮಂಜುನಾಥ್ ಶೇಟ್ ಆಶಯ ನುಡಿಗಳನ್ನಾಡಿದರು. ವಿಭಾಗಿಯ ನಿಯಂತ್ರಣಾಧಿಕಾರಿ ಕೆ.ಎಚ್. ಶ್ರೀನಿವಾಸ್ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ 18 ವರ್ಷಗಳಿಂದ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷರಾಗಿದ್ದ ಮಂಜುನಾಥ ಶೇಟ್ ಮತ್ತು ಇತರೆ ಪದಾಧಿಕಾರಿಗಳು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ನೂತನವಾಗಿ ಆಯ್ಕೆಯಾದ ಕನ್ನಡ ಕ್ರಿಯಾ ಸಮಿತಿಯ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಮಂಜುನಾಥ ಶೇಟರವರು ತಮ್ಮ ಅಧಿಕಾರ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಪದಾಧಿಕಾರಿಗಳನ್ನು ಮತ್ತು ಅಧಿಕಾರಿಗಳನ್ನು ಸ್ಮರಿಸಿ ಅಭಿನಂದನೆ ಸಲ್ಲಿಸಿದರು. ಶ್ರೀಮತಿ ಅಪರ್ಣ ನಾಯ್ಕ್ ಮತ್ತು ಶ್ರೀನಿವಾಸ್ ಪಟಗಾರ ಕಾರ್ಯಕ್ರಮ ನಿರೂಪಿಸಿದರು. ಪ್ರವೀಣ್ ಶೇಟ ವಂದಿಸಿದರು.