ದಾಂಡೇಲಿ : ನಗರದ ಶ್ರೀವೀರಭದ್ರೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಭಾನುವಾರ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿತು.
ಶನಿವಾರ ಆರಂಭಗೊಂಡಿದ್ದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಭಾನುವಾರ ಬೆಳಿಗ್ಗೆ ಸಕಲ ವಿಧಿ ವಿಧಾನಗಳೊಂದಿಗೆ ಅಗ್ನಿಕುಂಡಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಆನಂತರ ಪುರವಂತರಿಂದ ಒಡಪುಗಳ ಘೋಷಣೆಗಳ ಜೊತೆ ವಾದ್ಯ ಮೇಳಗಳೊಂದಿಗೆ ಪಲ್ಲಕ್ಕಿ ಮಹೋತ್ಸವವು ಶ್ರೀ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡು ಜೆ.ಎನ್.ರಸ್ತೆ, ಲಿಂಕ್ ರಸ್ತೆ, ಕೆ.ಸಿ.ವೃತ್ತ ಮಾರ್ಗವಾಗಿ ನದಿ ಪೂಜೆಯನ್ನು ನೆರವೇರಿಸಿ ಮರಳಿ ದೇವಸ್ಥಾನದ ಆವರಣಕ್ಕೆ ಆಗಮಿಸಿ ದೇವಸ್ಥಾನದ ಆವರಣದಲ್ಲಿ ನಿರ್ಮಿಸಿದ ಅಗ್ನಿಕುಂಡವನ್ನು ಪ್ರವೇಶ ಮಾಡುವ ಮೂಲಕ ಪಲ್ಲಕಿ ಉತ್ಸವ ಸಂಪನ್ನಗೊಂಡಿತು.
ಅಗ್ನಿಕುಂಡ ಪ್ರವೇಶ ಕಾರ್ಯಕ್ರಮದ ನಂತರ ಆಗಮಿಸಿದ್ದ ಭಕ್ತಾಭಿಮಾನಿಗಳಿಗೆ ಅನ್ನ ಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ನೇತೃತ್ವದಲ್ಲಿ ನಡೆದ ವಾರ್ಷಿಕ ಜಾತ್ರಾ ಮಹೋತ್ಸವದ ಯಶಸ್ಸಿಗೆ ಶ್ರೀ ವೀರಶೈವ ಸೇವಾ ಸಂಘ, ಅಕ್ಕನ ಬಳಗ, ಜಗಜ್ಯೋತಿ ಶ್ರೀ ಬಸವೇಶ್ವರ ಸಮಿತಿ, ಶ್ರೀ ಬಸವೇಶ್ವರ ಭಜನಾ ಮಂಡಳಿ, ಶ್ರೀ ಚನ್ನಬಸವೇಶ್ವರ ಸೇವಾ ಸಮಿತಿ, ಬಜರಂಗದಳ ಹಾಗೂ ಭಕ್ತಾಭಿಮಾನಿಗಳು ಶ್ರಮಿಸಿದ್ದರು.