ಭರಣಿ ನಕ್ಷತ್ರ ೧ ನೇಪಾದ:
ಸ್ವಯಂಭೂಃ ಶಂಭುರಾದಿತ್ಯಃ ಪುಷ್ಕರಾಕ್ಷೋ ಮಹಾಸ್ವನಃ|ಅನಾದಿನಿಧನೋ ಧಾತಾ ವಿಧಾತಾ ಧಾತುರುತ್ತಮಃ ||
ಭಾವಾರ್ಥ:- “ಸ್ವಯಂಭೂ” ಎಂದರೆ ತನ್ನಿಂದಲೇ ತಾನು ಉದ್ಭವಿಸುವಾತನು. ಉತ್ಪತ್ತಿಯಾಗುವ ಪ್ರತಿಯೊಂದಕ್ಕೂ ಒಂದು ಕಾರಣವಿರಲೇಬೇಕು.ಅಂದರೆ ಇನ್ನೊಂದು ವಸ್ತುವಿನ ಅವಶ್ಯಕತೆ ಅಥವಾ ಅಗತ್ಯತೆ ಇರುತ್ತದೆ. ಪರಮಾತ್ಮನೇ ಎಲ್ಲ ವಸ್ತುಗಳ ಉತ್ಪತ್ತಿಗೆ ಮೂಲ ಕಾರಣನು. ಆದರೆ ಅವನ ಇರುವಿಕೆಗೆ ಇನ್ನೊಂದು ವಸ್ತುವಿನ ಅಗತ್ಯವಿಲ್ಲ.”ಶಂಭುಃ” ಅಂದರೆ ತನ್ನ ಭಕ್ತರಿಗೆ ಸುಖವನ್ನು ಕೊಡುವವವನು.ಅಂದರೆ ಆಂತರಿಕವಾಗಿ ಸದ್ಗುಣಗಳನ್ನು, ಬಾಹ್ಯವಾಗಿ (ಹೊರಗಡೆ) ಐಶ್ವರ್ಯವನ್ನೂ ಕೊಡುವವವನು. ಶಿವ,ಶಂಭು,ಸ್ತಾಣು ಮುಂತಾದವೆಲ್ಲವೂ ಈಶ್ವರನ ಹೆಸರುಗಳಾಗಿವೆ.ಇದರಿಂದ ವಿಷ್ಣು ಮತ್ತು ಶಿವ ಇಬ್ಬರೂ ಬೇರೆ ಬೇರೆ ಅಲ್ಲ,ಒಬ್ಬನೇ ಪರಮಾತ್ಮನ ಎರಡು ರೂಪಗಳು ಎಂಬುದು ಸಿದ್ಧವಾಗುತ್ತದೆ (ಸಾಬೀತಾಗುತ್ತದೆ). “ಆದಿತ್ಯಃ”ಎಂದರೆ ತೇಜೋಮಯನಾದ ಪುರುಷನು. ಜ್ಯೋತಿರ್ಮಯನು. ಸೂರ್ಯನಂತಿರುವವನು. ಇಡೀ ಪ್ರಪಂಚವನ್ನು ಸೂರ್ಯನೇ ಬೆಳಗುವವನು ಆ ಪರಮಾತ್ಮನು. “ಪುಷ್ಕರಾಕ್ಷಃ” ಎಂದರೆ ಕಮಲದಂತೆ ಸುಂದರವಾದ ಕಣ್ಣುಗಳಿರುವವನು.ಶ್ರುತಿ ರೂಪವಾದ ನಾದವು ಯಾವನಿಗಿದೆಯೋ ಆತನು “ಮಹಸ್ವನನು”. ಋಗ್ವೇದ, ಯಜುರ್ವೇದ ಮುಂತಾದವವುಗಳೇ ಪರಮಾತ್ಮನ ಉಸಿರಾಗಿದೆ. “ಅನಾದಿ ನಿಧನಃ”ಎಂದರೆ ಜನನ ಮರಣ ರಹಿತನು.”ಧಾತಾ” ಎಂದರೆ ನಾನಾ ರೂಪವುಳ್ಳ ಜಗತ್ತಿಗೆ ಆಧಾರವಾಗಿರುವನು ಮತ್ತು ಎಲ್ಲರಲ್ಲಿಯೂ ಎಲ್ಲ ಅನುಭವಗಳನ್ನು ಬೆಳಗುವವನು. “ವಿಧಾತಾ” ಎಂದರೆ ಕರ್ಮಗಳನ್ನು ಅಥವಾ ಅವುಗಳ ಫಲವನ್ನು ಉಂಟು ಮಾಡುವವನು. “ಧಾತುರುತ್ತಮಃ” ಎಂದರೆ ಬ್ರಹ್ಮ(ಧಾತು) ನಿಗಿಂತಲೂ ಉತ್ಕೃಷ್ಟನು.
(ಸಂ-ಡಾ.ಚಂದ್ರಶೇಖರ.ಎಲ್.ಭಟ್.ಬಳ್ಳಾರಿ).