ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ಕದಂಬ ಕನ್ನಡ ಜಿಲ್ಲೆ ಹೋರಾಟಕ್ಕೆ ಸಂಘಟಿತ ನಿರ್ಣಯ
ಮುಂಡಗೋಡು : ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿ ಕದಂಬ ಕನ್ನಡ ಜಿಲ್ಲಾ ರಚನೆಯ ಯಶಸ್ಸಿಗೆ ಪ್ರಾರ್ಥಿಸಿ ಚಂಡಿಕಾ ಯಾಗ ನಡೆಸಿ ದೇವರ ಅನುಗ್ರಹ ಪಡೆದು ಕದಂಬ ಕನ್ನಡ ಜಿಲ್ಲೆ ಹೋರಾಟಕ್ಕೆ ಅಡಿ ಇಟ್ಟಿದ್ದೇವೆ. ಕದಂಬ ಕನ್ನಡ ಜಿಲ್ಲೆ ರಚನೆಯಾಗುವಂತೆ ಆಗ್ರಹಿಸಿ ಎಲ್ಲ ಕಡೆ ಪೂವಭಾವೀ ಸಭೆಗಳನ್ನು ನಡೆಸಲಾಗುತ್ತದೆ ಎಲ್ಲ ರೀತಿಯ ಹೋರಾಟಗಳನ್ನು ನಡೆಸಿ ಕದಂಬ ಕನ್ನಡ ಜಿಲ್ಲೆ ಮಾಡಿಯೇ ಮಾಡುತ್ತೇವೆ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಹಾಗೂ ಹಿತ ರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಮುಂಡಗೋಡಿನ ಪುರಭವನದಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣೆ ಟ್ರಸ್ಟ್ ವತಿಯಿಂದ ನಡೆದ ಕದಂಬ ಕನ್ನಡ ಜಿಲ್ಲೆ ರಚನೆ ಬಗ್ಗೆ ಚರ್ಚೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಇಂದು ಮುಂಡಗೋಡಿನಲ್ಲಿ ಇದು ಮೊದಲ ಕಾರ್ಯಕ್ರಮ. ನಾವೆಲ್ಲರೂ ಜಾತಿ, ಮತ, ಪಕ್ಷ, ಧರ್ಮದ ಭೇದವಿಲ್ಲದೇ ಎಲ್ಲರನ್ನೂ ಗಣನೆಗೆ ತೆಗೆದುಕೊಂಡು ಕದಂಬ ಕನ್ನಡ ಜಿಲ್ಲೆ ರೂಪಿಸಲು ಹೋರಾಟ ನಡೆಸೋಣ ಎಂದು ನಿಮ್ಮನ್ನು ಈ ಮೂಲಕ ಕೇಳಿಕೊಳ್ಳುತ್ತೇನೆ. ಮುಂದಿನ ದಿವಸಗಳಲ್ಲಿ ಕದಂಬ ಕನ್ನಡ ಜಿಲ್ಲೆಗಾಗಿ ಬೃಹತ್ ಮೆರವಣಿಗೆ, ಸತ್ಯಾಗ್ರಹಗಳು ನಡೆಯುತ್ತದೆ. ಮುಂಡಗೋಡದಿಂದ ಕಾರವಾರಕ್ಕೆ ಹೋಗಬೇಕೆಂದರೆ 180 ಕಿ.ಮೀ ದೂರ ಹೋಗಬೇಕು. ಯಾವುದೇ ಸರಕಾರಿ ಕೆಲಸ ಆಗಬೇಕೆಂದರೆ ಅಷ್ಟು ದೂರ ಹೋಗಿ ಕೆಲಸ ಆಗದಿದ್ದರೆ ಸಮಸ್ಯೆ ಆಗುತ್ತದೆ. ಜಿಲ್ಲೆಯಲ್ಲಿರುವ ಮೆಡಿಕಲ್ ಕಾಲೇಜು, ಕೊಂಕಣ ರೈಲ್ವೆ ಎಲ್ಲವೂ ಕಾರವಾರದಲ್ಲಿಯೇ ಇದೆ. ಯಾವುದೇ ಅಭಿವೃದ್ಧಿ ಯೋಜನೆಗಳು ಬಂದರೂ ಅವು ಕರಾವಳಿಯಲ್ಲಿ ಆಗುತ್ತಿವೆಯೇ ವಿನಃ ಘಟ್ಟದ ಮೇಲಿನ ಪ್ರದೇಶಗಳಿಗೆ ದೊರಕುತ್ತಿಲ್ಲ. ಅಂದು ಬ್ರಿಟೀಷರು ತಮ್ಮ ಅನುಕೂಲಕ್ಕಾಗಿ ಕೇಂದ್ರ ಮಾಡಿಕೊಂಡ ಕಾರವಾರವನ್ನೇ ಇಂದಿಗೂ ನಾವು ಜಿಲ್ಲಾ ಕೇಂದ್ರವೆಂದು ಬಳಸುತ್ತಿದ್ದೇವೆ. ರಾಮನಗರದಂತಹ ಚಿಕ್ಕ ಪ್ರದೇಶಗಳೇ ಜಿಲ್ಲೆಯಾಗಿರುವಾಗ ನಾವು ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸುವುದರಲ್ಲಿ ತಪ್ಪೇನಿದೆ?
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದಂತಹ ಸಂದರ್ಭದಲ್ಲಿ ಒಂದು ಜಿಲ್ಲೆಗೆ ಒಂದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಕೊಡುವ ನಿಯಮವಿದೆ. ಕಾರವಾರದಲ್ಲಿ ಅದಾಗಲೇ ವೈದ್ಯಕೀಯ ಕಾಲೇಜು ಇದೆ. ಎಲ್ಲವನ್ನೂ ಅಲ್ಲಿಯೇ ಮಾಡಲಾಗುತ್ತದೆ ಎಂಬ ಉತ್ತರ ಸಿಕ್ಕಿತು. ಕೇವಲ ಮೆಡಿಕಲ್ ಕಾಲೇಜು, ಆಸ್ಪತ್ರೆ ಮಾತ್ರ ಅಲ್ಲ ಎಲ್ಲ ಬಗೆಯ ಅಭಿವೃದ್ಧಿ ಯೋಜನೆಗಳು ದೊರೆಯಬೇಕೆಂದರೆ ಪ್ರತ್ಯೇಕ ಜಿಲ್ಲೆ ರಚನೆ ಆಗಲೇಬೇಕು. ಕಾನೂನಿನ ಪ್ರಕಾರ ಜಿಲ್ಲಾ ಕೇಂದ್ರ ಎಲ್ಲ ತಾಲೂಕುಗಳಿಗೆ 80 ಕಿ.ಮೀಗಿಂತ ಹೆಚ್ಚು ದೂರದಲ್ಲಿರಬಾರದು. ಆದರೆ ನಮಗೆ 250 ಕಿ.ಮೀ ದೂರದಲ್ಲಿದ್ದರೂ ಸಹ ನಾವ್ಯಾರೂ ಈ ಕುರಿತು ಪ್ರತಿಭಟನೆ ಮಾಡುತ್ತಿಲ್ಲ. ಹೋರಾಟ ಮಾಡಲು ನಮ್ಮೆಲ್ಲರಿಗೂ ಶಕ್ತಿ ಇದೆ. ಆದರೆ ನಮ್ಮಲ್ಲಿರುವ ನಕಾರಾತ್ಮಕತೆಯೇ ನಮ್ಮ ಹೋರಾಟಕ್ಕೆ ತಡೆಯಾಗಿದೆ. ನಮ್ಮಲ್ಲಿರುವ ಶಕ್ತಿ ನಮಗೆ ಅರಿವಾಗಬೇಕು. ಕದಂಬರನ್ನು ಮರೆತ ಕರ್ನಾಟಕದಲ್ಲಿ ಕದಂಬರ ಹೆಸರಿನ ಜಿಲ್ಲೆ ರಚಿಸೋಣ ಎಂದರು.
ಡಿ.30ರಂದು ಮುಂಡಗೋಡದ ಮಾರಿಕಾಂಬಾ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು. ಕಾರ್ಯಕ್ರಮದಲ್ಲಿ ಕದಂಬ ಕನ್ನಡ ಜಿಲ್ಲಾ ರಚನೆಯ ಅವಶ್ಯಕತೆಯ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವರಾಜ ಓಷಿಮಠ್, ಎಂ.ಎಂ.ಭಟ್ಟ, ಶಿವಾನಂದ ದೇಶಹಳ್ಳಿ, ಜಿ.ಎಸ್.ಹೆಗಡೆ, ಹನುಮಂತ ಆರೇಗೊಪ್ಪ, ಭೀಮಣ್ಣ ಹೂಗಾರ್, ಚಿದಾನಂದ ಹರಿಜನ, ಗುಡ್ಡಪ್ಪ ಕಾತೂರು, ಬಸವರಾಜ ಸಂಗಮೇಶ್ವರ, ಮಂಜುನಾಥ ಪಾಟೀಲ್, ಸುಭಾಷ್ ವಡ್ಡರ್, ಎಸ್.ಬಿ. ಹೂಗಾರ್, ಅನಿಲ್ ನಾಯಕ್ ಶಿರಸಿ ಸೇರಿದಂತೆ ಸಾರ್ವಜನಿಕರು ಇದ್ದರು. ಕಾರ್ಯಕ್ರಮಕ್ಕೆ ಎಸ್. ಫಕೀರಪ್ಪನವರು ಸಹಕಾರ ನೀಡಿದ್ದರು.
ಡಿ.30 ರಂದು ಮುಂಡಗೋಡಿನ ಶ್ರೀಮಾರಿಕಾಂಬಾ ದೇವಾಲಯದಿಂದ ತಹಶೀಲ್ದಾರ್ ಕಛೇರಿಯ ವರೆಗೆ ಕಂದಬ ಕನ್ನಡ ಜಿಲ್ಲೆಗಾಗಿ ಮೆರವಣಿಗೆ ನಡೆಸಿ, ಮನವಿ ಸಲ್ಲಿಸಲಾಗುವುದು. – ಅನಂತಮೂರ್ತಿ ಹೆಗಡೆ, ಅಧ್ಯಕ್ಷರು, ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್