ಕಾರವಾರ: ರವಿವಾರ ನಡೆದ ಭೂಕಂಪನಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮಾಹಿತಿ ನೀಡಿದೆ. ಯಾವುದೇ ಭೂಕಂಪನದ ಸಂದೇಶಗಳು ರಿಯಾಕ್ಟರ್ ಮಾಪಕದಲ್ಲಿ ದಾಖಲಾಗಿಲ್ಲ ಎಂಬುದಾಗಿ ಸ್ಪಷ್ಟೀಕರಿಸಿದ್ದು, ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂಬುದಾಗಿ ತಿಳಿಸಿದೆ. ಒಂದು ವೇಳೆ ಸಾರ್ವಜನಿಕರಿಗೆ ಇಂತಹ ಯಾವುದೇ ಭೂಕಂಪನಗಳು ಅನುಭವಕ್ಕೆ ಬಂದಿದ್ದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ 1077, 08382229857 ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಘಟನೆಯ ವಿವರ:
ಡಿ.1, ರವಿವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಸಿದ್ದಾಪುರ, ಕಾನಸೂರು, ಮತ್ತಿಘಟ್ಟಾ, ಸಂಪಖಂಡ ಹೀಗೆ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಜೊತೆಯಲ್ಲಿ ಗುಡುಗಿನ ಶಬ್ದ ಹೋಲುವ ಶಬ್ದವೂ ಕೂಡಾ ಕೇಳಿದೆ ಎಂಬ ಮಾಹಿತಿಯೂ ಸಾರ್ವಜನಿಕರಿಂದ ಕೇಳಿಬಂದಿತ್ತು. ಈ ಕುರಿತಾಗಿ ಭೂಕಂಪವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲೂ ಪ್ರಸಾರವಾಗಿತ್ತು. ಭೂಮಿ ಕಂಪಿಸಿದ ಅನುಭವ ಕಂಡು ಜನತೆ ಭಯಭೀತರಾಗಿದ್ದರು. ಆದರೆ ವಿಪತ್ತು ನಿರ್ವಹಣಾ ಕೇಂದ್ರ ನೀಡಿದ ಸ್ಪಷ್ಟನೆಯಿಂದಾಗಿ ಯಾವುದೇ ಭಯಪಡುವ ಅಗತ್ಯವಿಲ್ಲ ಎಂಬುದಾಗಿ ತಿಳಿದುಬಂದಿದೆ.