ಅರಣ್ಯ ಭೂಮಿ ಹಕ್ಕು ಭಿಕ್ಷೆಯಲ್ಲ, ಸಂವಿಧಾನಬದ್ಧ ಹಕ್ಕು: ರವೀಂದ್ರ ನಾಯ್ಕ
ಅಂಕೋಲಾ: ಅರಣ್ಯವಾಸಿಗಳಿಗೆ ಅರಣ್ಯ ಭೂಮಿ ಹಕ್ಕು ನೀಡುವುದು ಭಿಕ್ಷೆ ಅಥವಾ ದಾನವಲ್ಲ, ಸಂವಿಧಾನಬದ್ಧ ಹಕ್ಕು. ಇಚ್ಛಾಶಕ್ತಿ ಕೊರತೆಯಿಂದ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ಅವರು ತಾಲೂಕಿನ ಜೈ ಹಿಂದ್ ರಂಗಮಂದಿರದಲ್ಲಿ ಅರಣ್ಯವಾಸಿಗಳ ಬೆಂಗಳೂರು ಚಲೋ ಕಾರ್ಯಕ್ರಮದ ಅರಣ್ಯವಾಸಿಗಳ ಬೃಹತ್ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಹೇಳಿದರು. ನಿರಂತರ ೩೩ ವರ್ಷ ಹೋರಾಟ ಸಂಘಟನೆ ಮೂಲಕ ಅರಣ್ಯ ಭೂಮಿ ಹಕ್ಕಿಗಾಗಿ ಜನಾದೋಂಲನ ಜರುಗಿದರೂ ಸಹಿತ ಅರಣ್ಯವಾಸಿಗಳಿಗೆ ಭೂಮಿ ಹಕ್ಕು ದೊರಕದಂತಾಗಿದೆ.
ಜಿಲ್ಲಾ ಪ್ರಧಾನ ಸಂಚಾಲಕರಾದ ಜೆ.ಎಮ್. ಶೆಟ್ಟಿ ಮಾತನಾಡುತ್ತಾ ಅರಣ್ಯ ಭೂಮಿ ಹಕ್ಕು ಅರಣ್ಯವಾಸಿಗಳಿಗೆ ಒದಗಿಸಿದಿದ್ದಲ್ಲಿ ಜಿಲ್ಲೆಯು ನಿರಾಶ್ರಿತರ ಜಿಲ್ಲೆಯಾಗುವುದು. ಸರ್ಕಾರ ಗಂಭೀರವಾಗಿ ಚಿಂತಿಸಬೇಕು ಹಾಗೂ ಕಸ್ತೂರಿ ರಂಗನ್ ವರದಿಯನ್ನು ಕೇಂದ್ರ ಸರ್ಕಾರ ಸಂಪೂರ್ಣ ತಿರಸ್ಕರಿಸಬೇಕೆದು ಆಗ್ರಹಿಸಿದ್ದರು. ಸಾಮಾಜಿಕ ಚಿಂತಕ ಆರ್. ವಿ. ನಾಯಕ ಮಾತನಾಡುತ್ತಾ ಅರಣ್ಯ ಹಕ್ಕು ಕಾಯಿದೆ ಅನುಷ್ಠಾನ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಕಾನೂನು ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ವಿಫಲವಾಗದಂತೆ ಲಕ್ಷ್ಯ ವಹಿಸಬೇಕೆಂದು ಅವರು ಹೇಳಿದರು.
ಕಾರ‍್ಯಕ್ರಮದಲ್ಲಿ ಸ್ವಾಗತ ಅಚವೆ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಜಿಲ್ಲಾ ಸಂಚಾಲಕ ರಾಜೇಶ ಮಿತ್ರ, ಹಿರಿಯ ವಕೀಲ ಉಮೇಶ ನಾಯ್ಕ, ಪಾಂಡುರಂಗ ಗೌಡ, ತಾಲೂಕಾ ಅಧ್ಯಕ್ಷರು ರಮಾನಂದ ನಾಯ್ಕ, ಉದಯ ನಾಯ್ಕ, ಮಾತನಾಡಿದ್ದರು. ರೇಣುಕಾ ಸಿದ್ದಿ ಡೋಂಗ್ರಿ, ವೆಂಕಟರಮಣ ಕೆ. ನಾಯ್ಕ, ರಾಮಚಂದ್ರ ತಾಡೇಲ್, ಸಂದೇಶ ನಾಯ್ಕ ಬ್ರಮೂರ್ ಉಪಸ್ಥಿತರಿದ್ದರು. ತಾಲೂಕಾ ಸಂಚಾಲಕ ಅರವಿಂದ ಗೌಡ ವಂದಣಾರ್ಪಣೆ ಮಾಡಿದರು.
ಶಿರೂರು ದುರಂತದಲ್ಲಿ ಮೃತಪಟ್ಟವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.
ಬೆಂಗಳೂರು ಚಲೋ ಯಶಸ್ಸಿಗೆ ತೀರ್ಮಾನ:
ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸುಗೋಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತ್ತೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.