ಯಲ್ಲಾಪುರ : ಯಾಂತ್ರಿಕ ಯುಗದ ಮಾನವ ಯಾವ ಮಾರ್ಗದಿಂದ ಹೋಗಬೇಕಿತ್ತೋ ಅದರಿಂದ ವಿಮುಖರಾಗುತ್ತಿದ್ದಾರೆ. ಸ್ವಾರ್ಥ ಹೆಚ್ಚಾಗಿದೆ. ಹಣ ಮಾಡಬೇಕು ಎನ್ನುವುದೇ ಕಾಯಕವಾಗಿದೆ ಅದರ ಮಾರ್ಗದ ಕುರಿತು ಯೋಚಿಸುವುದಿಲ್ಲ ಇಂತಹ ಸಂದರ್ಭದಲ್ಲಿ ದೇವಸ್ಥಾನಗಳು ಹೆಚ್ಚಾದಷ್ಟು ಮನಸ್ಸಿನಲ್ಲಿ ಒಳ್ಳೆಯ ಭಾವನೆ ಜಾಗೃತವಾಗಲು ಕಾರಣವಾಗುತ್ತದೆ ಎಂದು ರಾಜ್ಯ ಸರಕಾರದ ಆಡಳಿತ ಸುಧಾರಣಾ ಸಮಿತಿಯ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದ ನಾಯ್ಕನಕೆರೆಯ ದತ್ತ ಮಂದಿರದ ನೂತನ ಶಿಲಾಮಯ ದೇವಸ್ಥಾನದ ನಿಧಿ ಕುಂಭಕ್ಕೆ ನಿಧಿ ಸಮರ್ಪಣೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು. ಗುಡಿ ಕಟ್ಟಲು ಹಣಬೇಕು. ಆದರೆ ಕೇವಲ ಹಣದಿಂದ ಗುಡಿ ಕಟ್ಟಲು ಸಾಧ್ಯವಿಲ್ಲ. ನಮ್ಮಲ್ಲಿರುವ ಸಂಪತ್ತಿನ ಭಾಗ ಸಮಾಜಕ್ಕೂ ಹೋಗಬೇಕು. ಆರ್ಥಿಕ ಸಂಪನ್ನ ಜನರು ಸ್ವಯಂ ಪ್ರೇರಣೆಯಿಂದ ಈ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ವೇದಮೂರ್ತಿ ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ಮಾತನಾಡಿ, ಜಗದಲ್ಲಿ 84 ಕೋಟಿ ಜೀವರಾಶಿಗಳಿವೆ ಅದರಲ್ಲಿ ಮಾನವಂತವರಾದವರೇ ಮಾನವರು. ವಿದ್ಯಾವಂತರಾಗಿ, ಧರ್ಮದ ಶೃದ್ಧೆ ಇಟ್ಟುಕೊಂಡು ದೇವರ ಸಮೀಪ ಇರಬೇಕಾಗಿದೆ. ಈ ದೇವಸ್ಥಾನವನ್ನು ಎರಡು ಯತಿಗಳು ಸೇರಿ ಮೂರನೇ ಯತಿಗಳಿಗೆ ಹಸ್ತಾಂತರಿಸಿದ ನಂತರದಲ್ಲಿ ಈಗ ನಾಲ್ಕನೇ ಯತಿಗಳಿಗೆ ಹಸ್ತಾಂತರವಾಗಿದೆ. ಮಹಾತ್ಮರಿಂದ ಮಹಾತ್ಮರಿಗೆ ಸೇರಿರುವುದು ದೈವಿ ಸಂಕಲ್ಪ’ ಎಂದರು.
ದೇವಾಲಯದ ಉಸ್ತುವಾರಿ ಮಹೇಶ ಚಟ್ನಳ್ಳಿ ಮಾತನಾಡಿ ದೇವಾಲಯ ನಿಮಾಣಕ್ಕೆ ಸಹಕರಿಸುವಂತೆ ಮನವಿ ಮಾಡಿದರು, ನಿರ್ಮಾಣ ಸಮಿತಿ ಸದಸ್ಯ ನಾಗರಾಜ ಮದ್ಗುಣಿ ದಾನಿಗಳ ಯಾದಿ ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ‘ದತ್ತಮಂದಿರ ನಿರ್ಮಾಣ ಹಲವು ವರ್ಷಗಳ, ಹಲವರ ಕನಸು ಅದಕ್ಕೆ ರಾಘವೇಶ್ವರ ಶ್ರೀಗಳು ಪೂರ್ಣವಿರಾಮ ಹಾಕಿದ್ದಾರೆ. ನಾವು ಹಾಕಿದ ಜನರ ಭಕ್ತಿ ಭಾವದ ನಿಧಿ ಸಮರ್ಪಣೆ ಆತ್ಮದ ರೂಪದಲ್ಲಿ ಸಾವಿರಾರು ವರ್ಷಗಳ ಕಾಲ ಇರಲಿದೆ. ಎಂದ ಅವರು ದತ್ತ ಮೂರ್ತಿ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ತಾಲೂಕಿನ ದೇವಸ್ಥಾನಗಳ ತೀರ್ಥಗಳು ದತ್ತಮಂದಿರದಲ್ಲಿ ಅಭಿಷೇಕವಾಗಲಿದೆ. ಇದಕ್ಕಾಗಿ ರಥ ಯಾತ್ರೆ ಹೊರಡಲಿದೆ’ ಎಂದರು. ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ವೇದಿಕೆಯಲ್ಲಿದ್ದರು.
ಕು. ದೀಕ್ಷಾ ಹೆಗಡೆ ಪ್ರಾರ್ಥಿಸಿದರು, ಪ್ರಮೋದ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ನಿರ್ಮಾಣ ಸಮಿತಿಯ ಕೆ.ಟಿ.ಭಟ್ಟ ಗುಂಡ್ಕಲ್ ನಿರೂಪಿಸಿದರು, ಎಸ್.ವಿ.ಯಾಜಿ ವಂದಿಸಿದರು.