ಕಾರವಾರ: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ನಿಧನರಾದ ವಿಷ್ಣು ಮುಕ್ರಿ ಅವರಿಗೆ ಹಲವು ಪರಿಸರ ಗಣ್ಯರು ಶೃದ್ಧಾಂಜಲಿ ಸಲ್ಲಿಸಿದ್ದಾರೆ.
ಖ್ಯಾತ ವಿಜ್ಞಾನಿ ಪ್ರೊ. ಎಮ್.ಡಿ. ಸುಭಾಸ್ ಚಂದ್ರನ್ ಅವರು ವಿಷ್ಣು ಅವರು ಸದಾ ಜೊತೆಗೆ ಇದ್ದವರು, ಕ್ಷೇತ್ರ ಸಹಾಯಕರಾಗಿ ಬಂದು ನಮ್ಮ ಪರಿಸರ ವಿಜ್ಞಾನ ಕೇಂದ್ರದಲ್ಲಿ ನಿರಂತರ ಸೇವೆ ನೀಡಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ಅವರ ಅಗಲಿಕೆ ನಮಗೆ ದೊಡ್ಡ ನಷ್ಟ ಎಂದು ಕಂಬನಿ ಮಿಡಿದಿದ್ದಾರೆ.
ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಡಾ.ಟಿ.ವಿ. ರಾಮಚಂದ್ರ ವಿಷ್ಣು ಅವರ ಹಸಿರು ಸೇವೆಯನ್ನು ಸ್ಮರಿಸಿದ್ದಾರೆ. ವಿಜ್ಞಾನಿ ತಂಡದ ಜೊತೆ ಅಧ್ಯಯನಕಾರರಾಗಿ ಬೆಳೆದರು. ಅ.17 ರಂದು ಮೂಡಿಬಿದ್ರೆ ಕೆರೆ ಸಮ್ಮೇಳನದಲ್ಲಿ ವಿಷ್ಣು ಅವರು ಪರಿಸರ ವರದಿಯೊಂದನ್ನು ಮಂಡಿಸುವ ತಯಾರಿ ಮಾಡುತ್ತಿದ್ದರು ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ವೃಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವಿಷ್ಣು ಅವರು ಉ.ಕ. ಜಿಲ್ಲೆಯ ಎಲೆಮರೆಯ ಸಸ್ಯಶಾಸ್ತ್ರಜ್ಞರಾಗಿದ್ದರು ಎಂದು ಅವರ ಸೇವೆಯನ್ನು ಸ್ಮರಿಸಿದ್ದಾರೆ. ಕಡಲವಿಜ್ಞಾನಿ ಡಾ| ಪ್ರಕಾಶ ಮೇಸ್ತ ಅವರು ನಮ್ಮ “ನಮ್ಮ ಕಾಡು ನದಿ, ಕೆರೆ, ಸಮುದ್ರ ಅದ್ಯಯನದ ಸಂಗಾತಿಯನ್ನು ಕಳೆದುಕೊಂಡಿದ್ದೇನೆ.” ಎಂದು ಶೋಕ ಪ್ರಕಟಿಸಿದ್ದಾರೆ.
ಪರಿಸರ ವಿಜ್ಞಾನ ಕೇಂದ್ರದ ಅಧ್ಯಯನಕಾರ ಬಿ.ಎಂ. ಪ್ರಸನ್ನ “ನಮ್ಮಂಥ ಯುವ ಅಧ್ಯಯನಕಾರರಿಗೆ ಕಾಡಿನಲ್ಲೇ ಸಸ್ಯ ಪರಿಚಯ ಪಾಠ ಮಾಡಿದ ಸರಳ ವ್ಯಕ್ತಿತ್ವದ ವಿಷ್ಣು ಅಣ್ಣ ಅವರು ಎಂದು ಗುಣಗಾನ ಮಾಡಿದ್ದಾರೆ. ಇತ್ತೀಚೆಗೆ ಗೋವಾ ರಾಜ್ಯದ ಅರಣ್ಯ ಪ್ರದೇಶದ ಅಧ್ಯಯನವನ್ನು ನೆನಪು ಮಾಡಿದ್ದಾರೆ.
ಜ್ಞಾನ ಭಂಡಾರ ಹೊಂದಿದ್ದ ಸರಳ ವ್ಯಕ್ತಿತ್ವದ ವಿಷ್ಣು:
ಭಾರತೀಯ ವಿಜ್ಞಾನ ಮಂದಿರದ ಪರಿಸರ ವಿಜ್ಞಾನ ಕೇಂದ್ರದ, ಸಂಶೋಧನಾ ಕೇಂದ್ರ ಕುಮಾಟದಲ್ಲಿ, ಸಂಶೋಧಕನಾಗಿ ವಿಷಯ ತಜ್ಞನಾಗಿ, ಚಾಲಕನಾಗಿ, ಹಿರಿಯ ಪರಿಸರ, ಜೀವಶಾಸ್ತ್ರ ವಿಜ್ಞಾನಿಗಳಿಗೆ ಸಹಾಯಕ ಸಂಶೋಧಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಷ್ಣು ಮುಕ್ರಿ ನಿಧನರಾಗಿದ್ದಾರೆ.
ಜೀವ ಪ್ರಪಂಚದ ಬಗ್ಗೆ ಅಪಾರ ಜ್ಞಾನ ಹೊಂದಿದ್ದ ಇವರು, ಪಶ್ಚಿಮಘಟ್ಟ, ಕರಾವಳಿಯ ಸಸ್ಯ -ಪ್ರಾಣಿ ಪ್ರಭೇದಗಳನ್ನು ಕ್ಷಣಮಾತ್ರದಲ್ಲಿ ಗುರುತಿಸಿ ಅವುಗಳ ವೈಜ್ಞಾನಿಕ ಹೆಸರನ್ನು ನಿರರ್ಗಳವಾಗಿ ಹೇಳಬಲ್ಲ, ಅದರ ಮಹತ್ವವನ್ನು ತಿಳಿಸುವ ಸಾಮರ್ಥ್ಯ ಹೊಂದಿದ್ದ ಜೀವಿ ವರ್ಗೀಕರಣ ಶಾಸ್ತ್ರಜ್ಞನೇ (taxonomist) ಆಗಿದ್ದರು. ಅವರು ಹೆಚ್ಚು ಶಾಲಾ ಶಿಕ್ಷಣ ಪಡೆದವರೇನೂ ಅಲ್ಲದೇ ಇದ್ದರೂ, ಕೇವಲ ಆಸಕ್ತಿ, ಒಡನಾಟದ ಕಾರಣದಿಂದಲೇ ಸಂಪಾದಿಸಿದ ಗರ್ವರಹಿತ ಜ್ಞಾನ ಸಂಪತ್ತಿನ ಕಾರಣಕ್ಕೆ ಪಿಎಚ್ಡಿ ಪಡೆದವರೂ ಒಪ್ಪುವಂತೆ, ಸಸ್ಯಶಾಸ್ತ್ರಜ್ಞರೇ (Botonist ) ಆಗಿದ್ದರು.
ಅಪ್ಪಟ ಪರಿಸರ ಸೇವಕರಾಗಿದ್ದ ಅವರು ಪರಿಸರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ, ಅರಣ್ಯ ಪ್ರಭೇದಗಳ ಗುರುತಿಸುವಲ್ಲಿ ಅದರಲ್ಲೂ ವಿಶೇಷವಾಗಿ ಉತ್ತರ ಕನ್ನಡದ ಸಸ್ಯ ಪ್ರಾಣಿ ಪ್ರಭೇದಗಳ ಅಧ್ಯಯನಕಾರರಿಗೆ, ಪರಿಸರ ಆಸಕ್ತರಿಗೆ ಸಂರಕ್ಷಣಾ ತಜ್ಞರಿಗೆ, ಶಾಲಾ-ಕಾಲೇಜು ಜೈವಿಕ ವಿಭಾಗದ ಶಿಕ್ಷಕರಿಗೆ, ಸಂಶೋಧಕರಿಗೆ ಇವರು ಚಿರಪರಿಚಿತರಷ್ಟೇ ಅಲ್ಲದೆ ಅತಿ ಆಪ್ತರಾಗಿದ್ದವರು.
ಸಾಧಾರಣವಾಗಿ 300ಕ್ಕೂ ಹೆಚ್ಚು ಸಸ್ಯ ಪ್ರಭೇದಗಳ ಸ್ಥಳೀಯ ಹೆಸರಷ್ಟೇ ಅಲ್ಲದೆ, ವೈಜ್ಞಾನಿಕ ಹೆಸರೂ, ಅದರ ಸ್ವರೂಪವನ್ನು, ಅವುಗಳ ವೈಜ್ಞಾನಿಕ ವರ್ಗೀಕರಣದ ಮಾಹಿತಿಯನ್ನು ನಾಲಿಗೆ ತುದಿಯಲ್ಲಿಯೇ ಹೊಂದಿದ್ದುದು ಅವರ ವಿಶೇಷತೆ.
ಪಶ್ಚಿಮ ಘಟ್ಟ ಪ್ರದೇಶದಲ್ಲಿ, ವಿಶೇಷವಾಗಿ ಉತ್ತರ ಕನ್ನಡದಲ್ಲಿ ಕೆಲಸ ಮಾಡಿದ ಡಾ.ಟಿ.ವಿ.ರಾಮಚಂದ್ರ, ಡಾ. ಎಂ ಡಿ ಸುಭಾಷ್ ಚಂದ್ರನ್ ಹಾಗೂ ಇನ್ನಿತರ ಇಂದಿನ ತಲೆಮಾರಿನ ಯುವ ವಿಜ್ಞಾನಿಗಳೂ ಸಂಶೋಧಕರ ಜೊತೆಗೂ ಕೆಲಸ ಮಾಡಿದ ಅನುಭವ ಹೊಂದಿದ್ದ ಸಂಶೋಧಕ ಎಲೆಮರೆಯ ಕಾಯಿಯಂತಿದ್ದವರು ವಿಷ್ಣು ಮುಕ್ರಿ.
ಸುಲಭವಾಗಿ ಎಲ್ಲರೊಂದಿಗೂ ಬೆರೆಯುವ ಎಲ್ಲರ ಕಷ್ಟಕ್ಕೆ ಸ್ಪಂದಿಸುವ ಗುಣ ಹೊಂದಿದ್ದ ಇಂದಿನ ಯುವ ಪರಿಸರ ಸಂಶೋಧಕರಿಗೂ ಜೀವರಾಶಿ ಅಧ್ಯಯನಕಾರರಿಗೂ ಮಾರ್ಗದರ್ಶಿಯೇ ಆಗಿದ್ದ ಅವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಚಾಲಕ ವೃತ್ತಿಯ ಜೊತೆಗೆ ಸಂಶೋಧಕರಿಗೆ ಸಹಾಯಕರಾಗಿ ಕೆಲಸ ಮಾಡುತ್ತ ಸಸ್ಯಪ್ರಾಣಿ ಪ್ರಪಂಚದ ಬಗ್ಗೆ ಅಪಾರಜ್ಞಾನ ಹೊಂದಿದವರಾಗಿದ್ದರು.
ಎಂತಹದ್ದೇ ದಟ್ಟಾರಣ್ಯವಿರಲಿ ಎಷ್ಟೇ ಎತ್ತರದ ಗುಡ್ಡ ಬೆಟ್ಟಗಳಿರಲಿ ಅದೆಷ್ಟೇ ದುರ್ಗಮ ದಾರಿಯೇ ಆದರೂ ಅಲ್ಲಿಗೆ ತೆರಳಿ ಪ್ರದೇಶದ ವಸ್ತು ಸ್ಥಿತಿ, ಅಂದರೆ ಅಲ್ಲಿಯ ಸಸ್ಯ ಸಂಪತ್ತನ್ನು ದಾಖಲಿಸುವ ಚಾಕಚಕ್ಯತೆ ಇರುವ, ಮನೋಬಲವನ್ನು ಹೊಂದಿರುವ ದುರ್ಲಭ ವ್ಯಕ್ತಿಯಾಗಿದ್ದರು.
ಈ ರೀತಿಯ ವಿಶೇಷ ವ್ಯಕ್ತಿತ್ವದ, ಸೌಮ್ಯ ಸ್ವಭಾವದ, ಸದಾ ಕ್ರಿಯಾಶೀಲ, ಹಸನ್ಮುಖಿ ಸಂಶೋಧಕ, ಸಹೃದಯೀ ಪರಿಸರ ಜೀವರಾಶಿ ತಜ್ಞ, ದೇಶೀಯ ಪ್ರತಿಭೆ ಶ್ರೀ ವಿಷ್ಣುಮುಕ್ರಿ ವಾಹನ ಅಪಘಾತದಲ್ಲಿ ದುರ್ಮರಣ ಹೊಂದಿರುವುದು ಅವರ ಕುಟುಂಬದವರಿಗೆ, ಸಂಶೋಧಕ ಗಣಕ್ಕೆ, ಪರಿಸರಾಸಕ್ತರಿಗೆ, ಸಮಾಜಕ್ಕೆ ತುಂಬಲಾರದ ನಷ್ಟ.