ಶಿರಸಿ: ದುಷ್ಟರ ಸಂಹಾರ ಮಾಡಿ, ಶಿಷ್ಟರನ್ನು ರಕ್ಷಿಸಿದ ಸಂಕೇತ ವಿಜಯ ದಶಮಿ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಪ್ರಾಂತ ಪ್ರಚಾರಕ ನರೇಂದ್ರ ಜೀ ಹೇಳಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಶಿರಸಿ ನಗರದ ವತಿಯಿಂದ ಶನಿವಾರ ನಗರದ ಅಂಬಾಗಿರಿಯಲ್ಲಿ ಆಯೋಜಿಸಲಾಗಿದ್ದ ವಿಜಯದಶಮಿ ಉತ್ಸವದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು, ಅತ್ಯಂತ ದೀರ್ಘ ಇತಿಹಾಸವನ್ನು ಹೊಂದಿದ ಭಾರತ, ಜಗತ್ತಿನ ಉಳಿದ ದೇಶಗಳು ಜನ್ಮ ತಾಳುವ ಮುನ್ನ ಬದುಕಲು ಬೇಕಾದ ಪಾಠವನ್ನು ಸಾರಿತ್ತು. ಪ್ರಾಣ ಬಿಟ್ಟರೂ ಧರ್ಮ ಬಿಡೆನು ಎಂಬ ತತ್ವದಡಿ ಬದುಕಿದ್ದ ಮಹಾನ್ ದೇಶಭಕ್ತರನ್ನು ಒಳಗೊಂಡ ದೇಶ ದುರದೃಷ್ಟವಶಾತ್ ಹಲವಾರು ವರ್ಷಗಳ ಕಾಲ ಪರಾಧೀನವಾಗಿ ಉಳಿಯಿತು.ಇದಕ್ಕೆ ಕಾರಣ ಸಂಘಟನೆಯ ಕೊರತೆ. ಸಮಾಜದಲ್ಲಿ ಸಂಘಟನೆ ಎನ್ನುವ ಬದಲು ಸಮಾಜವೇ ಸಂಘಟನೆಯಾಗಬೇಕು. ಅಂದಾಗ ಮಾತ್ರ ನಮ್ಮತನದ ರಕ್ಷಣೆ ಸಾಧ್ಯ. ಹಿಂದೂ ಸಮಾಜದಲ್ಲಿನ ಅವಗುಣಗಳನ್ನು ತೊಡೆದುಹಾಕಿ, ಸಂಸ್ಕಾರಯುತ, ಸಶಕ್ತ ಸಮಾಜವನ್ನು ಸಂಘಟಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಶತಮಾನದ ಹೊಸ್ತಿಲಲ್ಲಿ ಇರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಂಚ ಪರಿವರ್ತನ ಉದ್ದೇಶದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಸಾಮಾಜಿಕವಾಗಿ ಬಾಂಧವ್ಯತೆ ಕುಂದುತ್ತಿದ್ದು, ಈ ನಿಟ್ಟಿನಲ್ಲಿ ಸಾಮರಸ್ಯವನ್ನು ತರಬೇಕಾಗಿದೆ. ಪ್ರತಿ ಮನೆಗಳಲ್ಲಿ ಆಚರಣೆಗಳು, ಸಂಸ್ಕಾರಗಳು, ಸಂಬಂಧಗಳ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಿಕೊಟ್ಟು, ಅವರನ್ನು ಜಾಗೃತಗೊಳಿಸುವ ಕಾರ್ಯವಾಗಬೇಕಿದೆ. ಸ್ವದೇಶಿ ವಸ್ತುಗಳ್ನು ಬಳಸುವ ಮೂಲಕ ಅವುಗಳ ಉತ್ಪಾದನೆಗೆ ಉತ್ತೇಜನ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಬದಲಿಗೆ ಪರಿಸರಕ್ಕೆ ಪೂರಕವಾಗಿರುವಂತಹ ವಸ್ತುಗಳನ್ನು ಬಳಸಿ ಮುಂದಿನ ತಲೆಮಾರುಗಳಿಗೆ ಸ್ವಚ್ಛಂದ ಪರಿಸರ ನೀಡಬೇಕಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾರತೀಯ ಸೈನ್ಯದ ನಿವೃತ್ತ ಸೈನಿಕ ತಿರುಮಲ ನಾಯ್ಕ, ಪ್ರಸ್ತುತ ಸಮಾಜದಲ್ಲಿ ಮಕ್ಕಳನ್ನು ಧೈರ್ಯವಂತರಾಗಿ ಬೆಳೆಸುವ ಬದಲು, ಹೂವಿನಂತೆ ಜೋಪಾನ ಮಾಡಿ, ಅತಿಯಾದ ಮುದ್ದಿನಿಂದ ಬೆಳೆಸುತ್ತಿರುವುದು ವಿಷಾದನೀಯವಾಗಿದೆ. ಇದು ಮಕ್ಕಳ ಭವಿಷ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಸಣ್ಣಪುಟ್ಟ ಸಮಸ್ಯೆಗಳನ್ನೂ ಎದುರಿಸಲಾಗದೇ ಓಡಿಹೋಗುವ ಪರಿಸ್ಥಿತಿಯನ್ನು ಸ್ವತಃ ಪಾಲಕರೇ ಸೃಷ್ಟಿಸಿಕೊಡುತ್ತಿದ್ದಾರೆ. ಮಕ್ಕಳನ್ನು ಹುಲಿಯಂತೆ ದೈರ್ಯಶಾಲಿಯಾಗಿ ಬೆಳೆಸಿ. ಕಷ್ಟಗಳು ಬಂದಾಗ ಎದುರಿಸುವ ಸಾಮರ್ಥ್ಯವನ್ನು ಎಚ್ಚರಿಸಿ. ಇಂಗ್ಲೀಷ್ ಮಾಧ್ಯಮದ ಶಾಲೆಗಳ ಮೋಹಕ್ಕೆ ಬಿದ್ದ ಪಾಲಕರು ನಮ್ಮ ಮೂಲ ಸಂಸ್ಕೃತಿಯನ್ನೇ ಮಕ್ಕಳಿಗೆ ತಿಳಿಸುವುದನ್ನು ಮರೆಯುತ್ತಿದ್ದು, ಪಾಠಗಳಷ್ಟೇ ಅಲ್ಲದೇ ಇಂಗ್ಲೀಷ್ ಸಂಸ್ಕೃತಿಯನ್ನೇ ಮಕ್ಕಳು ಮೈಗೂಡಿಸಿಕೊಳ್ಳುತ್ತಿದ್ದಾರೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ನಗರದ ನೀಲೇಕಣಿ ಭಾಗದಿಂದ ಆರಂಭಗೊಂಡ ಗಣವೇಶಧಾರಿ ಸ್ವಯಂಸೇವಕರ ಪಥ ಸಂಚಲನ, ಪ್ರಮುಖ ರಸ್ತೆಗಳಲ್ಲಿ ಸಾಗಿ, ಅಂಬಾಗಿರಿ ಕಾಳಿಕಾ ಭವಾನಿ ದೇವಾಲಯದ ಆವರಣದಲ್ಲಿ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಆರ್ಎಸ್ಎಸ್ ಪ್ರಮುಖರು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿಯ ಅನಂತಮೂರ್ತಿ ಹೆಗಡೆ ಸೇರಿದಂತೆ ಗಣವೇಶಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು.