ಬನವಾಸಿ: ಬೆಲೆ ಬಾಳುವ ಸಾಗವಾನಿ ಸೇರಿದಂತೆ ಇತರೆ ಜಾತಿಯ ನಾಟಾಗಳನ್ನು ಶಿರಸಿಯ ಚಿಪಗಿ ಮನೆಯಲ್ಲಿ ದಾಸ್ತಾನು ಮಾಡಿರುವ ಮಾಹಿತಿ ಮೇರೆಗೆ ದಾಳಿ ನಡೆಸಿದ ಶಿರಸಿ ಮತ್ತು ಬನವಾಸಿ ವಲಯ ಅರಣ್ಯಾಧಿಕಾರಿಗಳ ತಂಡ ಲಕ್ಷಾಂತರ ರೂ. ಮೌಲ್ಯದ ನಾಟಾ ಮತ್ತು ಓರ್ವ ಆರೋಪಿಯನ್ನು ಬಂಧಿಸಿದೆ.
ಸಮೀಪದ ಚಿಪಗಿಯ ನಿವಾಸಿ ದಾದಾಪೀರ್ ಖರೀಮ್ ಸಾಬ್ ಎಂಬುವವರ ಮನೆ ಮೇಲಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಶಿರಸಿ ಮತ್ತು ಬನವಾಸಿ ವಲಯ ಅರಣ್ಯಾಧಿಕಾರಿಗಳ ತಂಡವು ಲಕ್ಷಾಂತರ ರೂ. ಮೌಲ್ಯದ ನಾಟಾಗಳನ್ನು ವಶಕ್ಕೆ ಪಡೆದಿದೆ. ಮನೆಯಲ್ಲಿ ಅಡಗಿಸಿಟ್ಟ ಸಾಗವಾನಿ, ಬೀಟೆ, ಕಿಂದಳ, ನಂದಿ, ಹೆಬ್ಬಲಸು, ಅಕೇಶಿಯಾ ಹಾಗೂ ಹೊನ್ನೆ ಜಾತಿಯ 94 ನಾಟಾಗಳನ್ನು ವಶಕ್ಕೆ ಪಡೆದಿದೆ. ಕಟ್ಟಿಗೆ ಕತ್ತರಿಸುವ ಮಶೀನ್ ಮತ್ತು ಕಳ್ಳ ನಾಟಾ ಸಾಗಿಸಲು ಬಳಸಿದ ವಾಹನವನ್ನು ವಶಕ್ಕೆ ಪಡೆದ ಅರಣ್ಯಾಧಿಕಾರಿಗಳು ಆರೋಪಿತ ದಾದಾಪೀರ್ ಖರೀಮ್ ಸಾಬ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ.
ಶಿರಸಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಎಸ್.ನಿಂಗಾಣಿ ಮಾರ್ಗದರ್ಶನದಲ್ಲಿ ಬನವಾಸಿ ವಲಯ ಅರಣ್ಯಾಧಿಕಾರಿ ಭವ್ಯ ನಾಯ್ಕ , ಶಿರಸಿ ವಲಯ ಅರಣ್ಯಾಧಿಕಾರಿ ಗಿರೀಶ ನಾಯ್ಕ ನೇತೃತ್ವದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ರವೀಂದ್ರ ಎಸ್ ಕರ್ನಲ್ , ರಾಜೇಶ ಕೋಟಾರಕರ್, ಸಂತೋಷ ಕುರುಬರ್, ಮಾಲತೇಶ ಬಾರ್ಕಿ, ಕಾರ್ತಿಕ ನಾರ್ವೇಕರ್, ಅರಣ್ಯ ಪಾಲಕರಾದ ಮಾಲತೇಶ್ ಎಸ್ ಕೆ, ಮಂಜು ಶಿಗ್ಲಿ, ಭೋಜು ಚೌವ್ಹಾಣ, ಅಮೃತ ಅರಿಬೆಂಚಿ, ಸಿದ್ದು ಬಿರಾದರ್, ಚಾಲಕ ಅಸ್ಲಾಂ, ಮಂಜುನಾಥ ನಾಯ್ಕ, ತಾಜುದಿನ್ ಡಂಬಳಕರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದಾರೆ.