ಕಾರವಾರ: ಮಕ್ಕಳಲ್ಲಿ ಅಡಗಿರುವ ಸೃಜನಾತ್ಮಕ ಕಲೆಗೆ ಪೋಷಕರಿಂದ ಮತ್ತು ಶಿಕ್ಷಕಕರಿಂದ ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ದೊರೆತಲ್ಲಿ ಮಕ್ಕಳಲ್ಲಿನ ಕಲೆಯ ಅಭಿವೃದ್ದಿಗೆ ಮತ್ತಷ್ಟು ನೆರವಾಗಲಿದೆ ಎಂದು ನಗರಸಭೆಯ ಪೌರಾಯುಕ್ತ ಜಗದೀಶ್ ಗುಲಗಜ್ಜಿ ಹೇಳಿದರು.
ಅವರು ಗುರುವಾರ , ನಗರಸಭೆ ಸಭಾಂಗಣದಲ್ಲಿ , ಸ್ವಚ್ಚತಾ ಹೀ ಸೇವಾ ಪಾಕ್ಷಕಿದ ಅಂಗವಾಗಿ , ನಿರುಪಯುಕ್ತ ವಸ್ತುಗಳಿಂದ ವಿದ್ಯಾರ್ಥಿಗಳು ತಯಾರಿಸಿದ್ದ ಕಲಾತ್ಮಕ ವಸ್ತುಗಳನ್ನು ವೀಕ್ಷಿಸಿ ಮಾತನಾಡಿದರು.
ಪ್ರಕೃತಿಯಲ್ಲಿ ದೊರೆಯುವ ಪ್ರತಿಯೊಂದು ವಸ್ತುಗಳು ಕೂಡಾ ತನ್ನದೇ ಆದ ವಿಶೇಷತೆಯನ್ನು ಹೊಂದಿದ್ದು, ಯಾವುದೂ ಕೂಡಾ ನಿರುಪಯುಕ್ತವಲ್ಲ ಎಂಬುದನ್ನು ವಿದ್ಯಾರ್ಥಿಗಳು ಸಿದ್ದಪಡಿಸಿರುವ ಕಲಾತ್ಮಕ ವಸ್ತುಗಳನ್ನು ವೀಕ್ಷಿಸಿದಾಗ ಪ್ರತಿಯೊಬ್ಬರಿಗೂ ಅರಿವಾಗುತ್ತದೆ. ವಿದ್ಯಾರ್ಥಿಗಳಲ್ಲಿನ ಈ ರೀತಿಯ ಸೃಜಾನತ್ಮಕ ಕಲೆಗೆ ಸೂಕ್ತ ಪ್ರೋತ್ಸಾಹ ದೊರೆತಲ್ಲಿ ಇನ್ನೂ ಉತ್ತಮ ಕಲಾಕೃತಿಗಳು ಮೂಡಿ ಬರಲು ಸಾಧ್ಯವಾಗಲಿದೆ ಎಂದರು.
ನಿರುಪಯುಕ್ತ ಪ್ಲಾಸ್ಟಿಕ್ ವಸ್ತಗಳಿಂದ ತಯಾರಿಸಿದ್ದ ಆಕರ್ಷಕ ವಸ್ತುಗಳು ಮತ್ತು ತೆಂಗಿನ ಚಿಪ್ಪಿನಿಂದ ತಯಾರಿಸಿದ್ದ ವಸ್ತುಗಳು ಆಕರ್ಷಣೀಯವಾಗಿದ್ದವು. ಪೇಪರ್ ಕಪ್‌ಗಳು ಮತ್ತು ಪ್ಲಾಸ್ಟಿಕ್ ಕಪ್ ಗಳಲ್ಲಿ ಹಲವು ಆಕರ್ಷಕ ಅಲಂಕಾರಿಕ ವಸ್ತುಗಳನ್ನು ವಿದ್ಯಾರ್ಥಿಗಳು ತಯಾರಿಸಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.