ಶಿರಸಿ: ನಾನೇನು ತಪ್ಪು ಮಾಡಿಲ್ಲ, ಕಾನೂನಿನ ಮೇಲೆ ನಂಬಿಕೆಯಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇನೆಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ ಹೇಳಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ಕಾರವಾರ ಲೋಕಾಯುಕ್ತ ನ್ಯಾಯಾಲಯ ಹಾಗೂ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ವಿಜಯಕುಮಾರ್ ಒಂದು ವರ್ಷಗಳ ಜೈಲು ಶಿಕ್ಷೆ ಹಾಗೂ ರೂ.5000 ದಂಡವನ್ನು ವಿಧಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಉಷಾ ಹೆಗಡೆ, ನ್ಯಾಯಾಲಯದ ತೀರ್ಪನ್ನು ಗೌರವಿಸುತ್ತೇನೆ. ಲೋಕಾಯುಕ್ತ ನ್ಯಾಯಾಧೀಶರು ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದ್ದಾರೆ. ಇನ್ನು ಕಾನೂನು ಹೋರಾಟವನ್ನು ಮುಂದುವರೆಸುತ್ತೇನೆ. ಅಂಗನವಾಡಿ ಕಾರ್ಯಕರ್ತೆಯಾಗಿ, ಜಿಲ್ಲಾ ಪಂ. ಸದಸ್ಯೆಯಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದ್ದೇನೆ. ಸಾರ್ವಜನಿಕರು ನನ್ನ ಕೆಲಸವನ್ನು ಒಪ್ಪಿಕೊಂಡು ನನ್ನ ಬೆಂಬಲಕ್ಕೆ ಇದ್ದಾರೆಂಬುದೇ ಧೈರ್ಯ ಎಂದು ಹೇಳಿದ್ದಾರೆ.
ಘಟನೆಯ ಹಿನ್ನೆಲೆ: ಉಷಾ ಹೆಗಡೆ ತಾಲೂಕಿನ ಬದನಗೋಡ ಜಿ.ಪಂ.ಸದಸ್ಯೆಯಾಗುವ ಮೊದಲು ಶಿರಸಿ ನಗರದ ಶ್ರೀನಗರ ಅಂಗನವಾಡಿ ಕಾರ್ಯಕರ್ತೆಯಾಗಿದ್ದರು. ಈ ವೇಳೆ ಬಿಜೆಪಿಯಿಂದ ಜಿ.ಪಂ. ಚುನಾವಣೆಯಲ್ಲಿ ಭಾಗವಹಿಸಿ ಜಿ.ಪಂ.ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಏಕಕಾಲದಲ್ಲಿ ಜಿ.ಪಂ.ಸದಸ್ಯೆ ಹಾಗೂ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿ, ಎರಡೂ ಕಡೆ ಕರ್ತವ್ಯಕ್ಕೆ ಸರಿಯಾಗಿ ಹಾಜರಾಗದೇ, ಸುಳ್ಳು ದಾಖಲೆ ಸೃಷ್ಟಿಸಿ, ಸರ್ಕಾರದಿಂದ ಗೌರವಧನವೆಂದು 88,630 ರೂ. ಪಡೆದಿದ್ದಾರೆ ಎಂದು ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಗೊಂಡ ಪೋಲಿಸರು, ಭ್ರಷ್ಟಾಚಾರ ವಿರೋಧಿ ಕಾನೂನಿನಡಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ದೀರ್ಘ ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ 5000ರೂ. ಗಳ ದಂಡ ವಿಧಿಸಿ ತೀರ್ಪನ್ನು ನೀಡಿತ್ತು