ಶಿರಸಿ: ಸಂಸ್ಕೃತ ಭಾಷೆಯು ಅದೊಂದು ಅಗಾಧವಾದ ಜ್ಞಾನಭಂಢಾರವಾಗಿದೆ. ನಮಗೆ ಜೀವನದ ಪದ್ದತಿ ಮತ್ತು ಆದರ್ಶಗಳನ್ನು ರೂಪಿಸುವ ಭಾಷೆಯಾಗಿದೆ. ಇಂದು ಗಣಕೀಕರಣಗೊಂಡ ದೇವಭಾಷೆಯಾಗಿದೆ. ಇಂದು ಕೇವಲ ಹತ್ತು ದಿನದಲ್ಲಿ ಸಂಭಾಷಣೆ ಮಾಡುವದನ್ನು ಕಲಿಯಬಹುದಾದ ಭಾಷೆ ಸಂಸ್ಕೃತ ಎಂದು ಸಿದ್ದಾಪುರ ಪ್ರಶಾಂತಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ದಿನೇಶ ಶೆಟ್ಟಿ ಹೇಳಿದರು.
ಅವರು ಅವರು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಸಂಸ್ಕೃತ ಶಿಕ್ಷಣ ನಿರ್ದೇಶನಾಲಯ ಬೆಂಗಳೂರು, ಶ್ರೀಸಿದ್ದಿ ವಿನಾಯಕ ಸಂಸ್ಕೃತ ಪಾಠಶಾಲೆ ಹಾಳದಾಕಟ್ಟಾ ಪ್ರಶಾಂತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸಿದ್ದಾಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಸಂಸ್ಕೃತೋತ್ಸವ ಮತ್ತು ಅಸ್ಮಾಕಂ ಸಂಸ್ಕೃತಮ್ ಸರಣಿ ಕಾರ್ಯಕ್ರಮದ ಜಾಥಾಗೆ ಚಾಲನೆ ನೀಡಿ ಮಾತನಾಡುತ್ತಾ ಸಂಸ್ಕೃತ ಕಲಿಕೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಪ್ರತಿ ವಿದ್ಯಾರ್ಥಿಯು ಸಂಸ್ಕೃತ ಭಾಷೆ ಅಧ್ಯಯನ ಮಾಡಲಿ ಎಂದರು.
ಮುಖ್ಯಾಧ್ಯಾಪಕಿ ಸರಸ್ವತಿ ವಿ.ಪಿ, ಅರುಂಧತಿ ಹೆಗಡೆ, ರಾಘವೇಂದ್ರ ಬೇಡ್ಕಣಿ, ಕೆ.ಟಿ.ಮಡಿವಾಳ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಡಾ. ಪ್ರದೀಪ ಜೋಶಿ ಕಾರ್ಯಕ್ರಮ ನಿರ್ವಹಿಸಿದರು.