ಶಿರಸಿ: ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಲೆ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಸಹಯೋಗದಲ್ಲಿ ಪೋಷಣಾ ಮಾಸಾಚರಣೆ ನಡೆಯಿತು.
ಕಾರ್ಯಕ್ರಮವನ್ನು ಭರಣಿಯ ಕಾಶೀ ವಿಶ್ವನಾಥ ದೇವಸ್ಥಾನ ಧರ್ಮದರ್ಶಿಗಳಾದ ಎ.ಜಿ.ನಾಯ್ಕ ಭರಣಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ, ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳ ಮಗುವಿಗೆ ಅನ್ನ ಪ್ರಾಶನ, ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅದರೊಂದಿಗೆ ‘ಬೇಟಿ ಬಚಾವೋ ಬೇಟಿ ಪಡಾವೋ’ ‘ನಮ್ಮ ಮಗಳು ನಮ್ಮ ಶಕ್ತಿ’ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭೈರುಂಬೆ ಗ್ರಾ.ಪಂ ಉಪಾಧ್ಯಕ್ಷರಾದ ರಾಘವ ನಾಯ್ಕ ಬೆಳಲೆ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಯೋಜನಾಧಿಕಾರಿ ವೀಣಾ ಸಿರ್ಸಿಕರ್, ವಲಯ ಮೇಲ್ವಿಚಾರಕಿಯರಾದ ಗಿರಿಜವ್ವ ಬೀಡನಾಳ ಹಾಗೂ ಅನಿತಾ ಕೃಷ್ಣಮೂರ್ತಿ, ಗ್ರಾ.ಪಂ ಸದಸ್ಯೆ ಸವಿತಾ ಪಟಗಾರ, ಸಮನ್ವಯ ಸಮಿತಿ ಅಧ್ಯಕ್ಷೆ ಸುಮತಿ ಎನ್ ನಾಯ್ಕ, ಮುಖ್ಯೋಪಾಧ್ಯಾಯಿನಿ ಸುಮನಾ ಹೆಗಡೆ ಉಪಸ್ಥಿತರಿದ್ದರು. ಊರಿನ ನಾಗರೀಕರು, ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.