ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳ ಜೊತೆ ಸಭೆ: ದಿನಕರ ದೇಸಾಯಿ ಹೆಸರಲ್ಲಿ ಗಿಡ ನೆಟ್ಟ ಸಂಸದ
ಕಾರವಾರ: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಅಡಿ ಕಾರ್ಯ ನಿರ್ವಹಿಸುತ್ತಿರುವ ಕೈಗಾ ಅಣು ವಿದ್ಯುತ್ ಸ್ಥಾವರದ ಅಧಿಕಾರಿಗಳ ಜತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಸಭೆ ನಡೆಸಿದರು.
ಜಿಲ್ಲೆಯ ಸಂಸದರೊಬ್ಬರು ಇದೇ ಮೊದಲ ಬಾರಿಗೆ ಕೈಗಾ ಅಧಿಕಾರಿಗಳ ಸಭೆ ನಡೆಸಿ, ಸ್ಥಳೀಯ ಸಮಸ್ಯೆಗಳ ಬಗ್ಗೆ, ಅಣು ಸ್ಥಾವರದ ಕಾರ್ಯ ನಿರ್ವಹಣೆಯ ಚರ್ಚಿಸಿದ್ದು, ವಿಶೇಷವಾಗಿದೆ.
ಸಭೆಯಲ್ಲಿ ಮಾತನಾಡಿದ ಸಂಸದರು, ಕೈಗಾದಲ್ಲಿ ಸ್ಥಳೀಯರಿಗೆ ಅಣು ಸ್ಥಾವರದಲ್ಲಿ ಉದ್ಯೋಗ ಒದಗಿಸಬೇಕು. ಹೊರಗುತ್ತಿಗೆ ಹಾಗೂ ಇತರ ಪೂರಕ ಕಾರ್ಯಗಳಲ್ಲೂ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಸೂಚಿಸಿದರು. ಸಾಮಾಜಿಕ ಜವಾಬ್ದಾರಿ ನಿಧಿ(ಸಿಎಸ್ಆರ್)ಯನ್ನು ಸಮರ್ಪಕವಾಗಿ ಖರ್ಚು ಮಾಡಬೇಕು.ಹೆಚ್ಚು ಜನರಿಗೆ ಅನುಕೂಲವಾಗುವ ಕಾಮಗಾರಿಗಳನ್ನು ಕೈಗೆತ್ತಿಕೊಂಡು, ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಎನ್‌ಪಿಸಿಐಎಲ್ ಅಧಿಕಾರಿಗಳಿಗೆ ಸೂಚಿಸಿದರು.
ಕೈಗಾ 5 ಮತ್ತು 6ನೇ ಘಟಕ ನಿರ್ಮಾಣ ಸ್ಥಳ ವೀಕ್ಷಿಸಿ, ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದರು. ಮಾಜಿ ಶಾಸಕಿ, ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ, ಮಾಜಿ ಸಚಿವ ಆನಂದ ಅಸ್ನೋಟಿಕರ್, ಕೈಗಾ ಅಣು ವಿದ್ಯುತ್ ಕೇಂದ್ರದ ಸ್ಥಾನಿಕ ನಿರ್ದೇಶಕ ಪಿ.ಜಿ. ರಾಯಚೂರ್, ಕೈಗಾ ಎಂಪ್ಲಾಯೀಸ್ ಯೂನಿಯನ್ ಸದಸ್ಯರು ಸಭೆಯಲ್ಲಿದ್ದರು. ಕೈಗಾ ಪರಿಯೋಜನಾ ನೌಕರರ ಸಂಘ ಹಾಗೂ ಅಣು ಸ್ಥಾವರದ ವತಿಯಿಂದ ಸಂಸದರನ್ನು ಸನ್ಮಾನಿಸಲಾಯಿತು. ನೌಕರರ ಪಿಂಚಣಿ ಯೋಜನೆ ಜಾರಿಗೆ ಕ್ರಮ ವಹಿಸುವಂತೆ ಮನವಿ ಮಾಡಲಾಯಿತು.
ಸಭೆಗೂ ಪೂರ್ವದಲ್ಲಿ ಸಂಸದ ಕಾಗೇರಿ ಸ್ಥಳೀಯರ ಸಭೆ ನಡೆಸಿ, ಸಮಸ್ಯೆಗಳನ್ನು ಆಲಿಸಿದರು.
ದಿನಕರ ದೇಸಾಯಿ ಹೆಸರಲ್ಲಿ ಗಿಡ:
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ದಿನಕರ ದೇಸಾಯಿ ಅವರ ಹೆಸರಿನಲ್ಲಿ ಕೈಗಾ ಆವರಣದಲ್ಲಿ ಹಲಸಿನ ಗಿಡ ನೆಟ್ಟರು. ಜಿಲ್ಲೆಯ ಜನರಿಗೆ ಬದುಕುವುದನ್ನು ಕಲಿಸಿದವರು ದಿನಕರ ದೇಸಾಯಿ ಅವರು ಮಹಾನ್ ವ್ಯಕ್ತಿಗಳು ಎಂದು ಕಾಗೇರಿ ವಿವರಿಸಿದರು.