ಸೋದೆ ಸದಾಶಿವರಾಯ ಪ್ರಶಸ್ತಿಗೆ ಡಾ.ಡಿ.ವಿ. ಪರಮಶಿವಮೂರ್ತಿ ಆಯ್ಕೆ: ಸರ್ವಾಧ್ಯಕ್ಷರಾಗಿ ಡಾ.ವಸುಂಧರಾ ಫಿಲಿಯೋಜ
ಶಿರಸಿ: ನಾಡಿನ ಪ್ರತಿಷ್ಠಿತ ಸೋಂದಾ ಇತಿಹಾಸೋತ್ಸವ ಮತ್ತು ರಾಜ್ಯ ಮಟ್ಟದ ಇತಿಹಾಸ ಸಮ್ಮೇಳನ ಹಾಗು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭವು ಅ.19,20 ರಂದು ತಾಲೂಕಿನ ಸೋಂದಾದ ಸ್ವಾದಿ ಜೈನಮಠದಲ್ಲಿ ನಡೆಯಲಿದೆ.
ಈ ವರ್ಷದ ಸೋದೆ ಸದಾಶಿವರಾಯ ಪ್ರಶಸ್ತಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲಪತಿ ಹಾಗು ಸಂಶೋಧಕರೂ ಆಗಿರುವ ಡಾ.ಡಿ.ವಿ ಪರಮಶಿವಮೂರ್ತಿಯವರನ್ನು ಆಯ್ಕೆ ಮಾಡಲಾಗಿದೆ. ಹಾಗು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಹಿರಿಯ ಇತಿಹಾಸ ಸಂಶೋಧಕರಾದ ಡಾ.ವಸುಂಧರಾ ಫಿಲಿಯೋಜರವರನ್ನು ಆಯ್ಕೆಮಾಡಲಾಗಿದೆ ಎಂದು ಸೋಂದಾ ಇತಿಹಾಸೋತ್ಸವ ಮತ್ತು ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ ಸಮಾರಂಭ ಸಮಿತಿ ಸಂಚಾಲಕ ಡಾ.ಲಕ್ಷ್ಮೀಶ್ ಹೆಗಡೆ ಸೋಂದಾ ಮಾಹಿತಿ ನೀಡಿದ್ದಾರೆ.
ಪ್ರಶಸ್ತಿಯು ರೂ.10 ಸಾವಿರ ನಗದು, ಶಾಲು,ಹಾರ,ಸ್ಮರಣಿಕೆ ವಿಶೇಷವಾಗಿ ಸೋದೆ ಸದಾಶಿವರಾಯ ಪೇಟವನ್ನು ಒಳಗೊಂಡಿರುತ್ತದೆ.ಅ.19ರಂದು ಸ್ವರ್ಣವಲ್ಲೀ ಶ್ರೀಗಳು ಮತ್ತು ಸ್ವಾದಿ ಜೈನಮಠದ ಶ್ರೀಗಳವರ ಸಾನ್ನಿಧ್ಯದಲ್ಲಿ ಹಲವಾರು ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರದಾನ ನೆರವೇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.