ಯಲ್ಲಾಪುರ : ಜಿಲ್ಲೆಯ ಧಾರಣಾ ಸಾಮರ್ಥ್ಯಕ್ಕೂ ಇತಿಮಿತಿ ಇದ್ದು, ಧಾರಣಾ ಸಾಮರ್ಥ್ಯದ ಅಧ್ಯಯನ ಆಗಬೇಕಿದೆ. ಇದಕ್ಕೆ ಧ್ವನಿ ಬಲಪಡಿಸಿ, ನಮ್ಮ ಅಗತ್ಯತೆಯನ್ನು ರಚನಾತ್ಮಕ, ಸಕಾರಾತ್ಮಕವಾಗಿ ಬೇಡಿಕೆ ಇಟ್ಟು ಈಡೇರಿಸಿಕೊಳ್ಳಬೇಕಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ನ್ಯೂಕ್ಲೀಯರ್ ಪವರ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿ. ಕೈಗಾದ ನಿಗಮ ಸಾಮಾಜಿಕ ಜವಾಬ್ದಾರಿಯಡಿಯಲ್ಲಿ ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2.62 ಕೋಟಿ ರೂ ವೆಚ್ಚದಲ್ಲಿ ನಿಮಿಸಲಾಗುತ್ತಿರುವ ಬೇಣದಗುಳಿ ಹೆಗ್ಗಾರ ರಸ್ತೆಯ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆತಂಕಗಳ ಮದ್ಯೆ ಆರಂಭವಾದ ಕೈಗಾ ಯೋಜನೆ ಆತಂಕದಲ್ಲಿಯೇ ಮುಂದುವರೆದಿದೆ. ಆದರೆ ದೇಶದ ಅಗತ್ಯತೆ ಮತ್ತು ಸ್ಥಳೀಯ ಅಭಿವೃದ್ದಿಗಳಿಗಾಗಿ ಸುಮ್ಮನಿರಬೇಕಿದೆ ಎಂದ ಅವರು ಸಾಮಾಜಿಕ ಅಭಿವೃದ್ಧಿಯ ಜೊತೆಗೆ ಜೀವನದ, ಅಭಿವೃದ್ಧಿಯೂ ಇರಬೇಕು. ಕೈಗಾದಿಂದ ಅಭಿವೃದ್ಧಿ ಕಾರ್ಯವಾಗುತ್ತಿರುವ ಕಾರಣ ಈ ಭಾಗಕ್ಕೆ ವಿನಿಯೋಗಿಸುವ ಹಣದಿಂದ ಬೇರೆ ಪ್ರದೇಶದಲ್ಲಿ ಅಭಿವೃದ್ಧಿ ಮಾಡಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶಿವರಾಮ ಹೆಬ್ಬಾರ ಮಾತನಾಡಿ, ‘ಕೈಗಾ ವಿರೋಧದಿಂದ ಟೌನ್‌ಶಿಪ್ ದೂರಾಯಿತೇ ವಿನಃ ಯೋಜನೆ ನಿಲ್ಲಲಿಲ್ಲ. ವಿರೋಧದ ಕಾರಣ ಮತ್ತೆ ಅಭಿವೃದ್ಧಿ ಕಳೆದುಕೊಳ್ಳಲು ಸಿದ್ಧನಿಲ್ಲ. ಜನಸಾಮಾನ್ಯರು ಯೋಜನೆಯನ್ನು ಒಪ್ಪಿಕೊಂಡಿದ್ದೇವೆ. ಮುಂದಿನ ಯೋಜನೆಗೆ ಕ್ಷೇತ್ರದ ಶಾಸಕನಾಗಿ ಸಹಕಾರ ನೀಡುತ್ತೇನೆ. ಉದ್ಯೋಗದ ವಿಷಯ ಬಂದಾಗ ನಮ್ಮ ಮಕ್ಕಳಿಗೆ ಉದ್ಯೋಗ ನೀಡುವ ಕಾರ್ಯಕ್ಕೆ ಆದ್ಯತೆ ನೀಡಿ’ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಗುದ್ದಲಿ ಪೂಜೆ ನೆರವೇರಿಸಿದ, ನಿವೃತ್ತಿಯಾಗಲಿರುವ ಕಾರಣಕ್ಕೆ ಗ್ರಾ.ಪಂ. ಮತ್ತು ಶಾಸಕರಿಂದ ಸನ್ಮಾನ ಸ್ವೀಕರಿಸಿದ ಸ್ಥಳ ನಿರ್ದೇಶಕ ಪ್ರಮೋದ ರಾಯಚೂರು ಮಾತನಾಡಿ ‘ಕೈಗಾ ನಿಮ್ಮ ಜೊತೆ ಇದೆ. ನೀವೂ ಕೈಗಾದ ಜೊತೆ ಇದ್ದರೆ ಅಭಿವೃದ್ಧಿ ಇನ್ನಷ್ಟು ಹೆಚ್ಚಾಗಲಿದೆ. ಇಲ್ಲಿನ ಇಂಜಿನೀಯರ್ ವಿದ್ಯಾರ್ಥಿಗಳು ಗೇಟ್ ಪರೀಕ್ಷೆಯಲ್ಲಿ ಪಾಸಾದರೆ ಕೈಗಾದಲ್ಲಿ ಉದ್ಯೋಗಾವಕಾಶವಿದೆ ಎಂದ ಅವರು ಇಲ್ಲಿ ಹೆಚ್ಚು ಅಭಿವೃದ್ಧಿ ಮಾಡಲಾಗಿದೆ. ಇದಕ್ಕೆ ಕಾರಣ ಇಲ್ಲಿನ ಸಂಸದರು, ಶಾಸಕರು. ಈ ಭಾಗ ನನ್ನ ಮನೆಯಿದ್ದಂತೆ ಇಲ್ಲಿನ ಜನರ ಪ್ರೀತಿ ವಿಶ್ವಾಸ ಮರೆಯಲಾರೆ’ ಎಂದರು.
ಸಿ.ಎಸ್.ಆರ್.ನಿಧಿ ಅಧ್ಯಕ್ಷ ಎಸ್.ಜೆ.ತಿಪ್ಪೇಸ್ವಾಮಿ ಮಾತನಾಡಿದರು. ಕೈಗಾ ಕೇಂದ್ರ ನಿರ್ದೇಶಕರಾದ ಬಿ. ವಿನೋದ ಕುಮಾರ, ಎನ್ಪಿಸಿಎಲ್ ಅಕಾರಿಗಳಾದ ಜೆ.ಎಲ್. ಸಿಂಗ್ ವೈ.ಬಿ., ಸುವರ್ಣ, ಸುರೇಶ್, ಕಾರ್ಮಿಕ ಸಂಘದ ಅಧ್ಯಕ್ಷ ಜಗದೀಶ ಗುನಗಾ ಗ್ರಾ.ಪಂ.ಉಪಾಧ್ಯಕ್ಷೆ ಮಂಗಲಾ ಕುಣಬಿ ವೇದಿಕೆಯಲ್ಲಿದ್ದರು. ಗ್ರಾ.ಪಂ.ಸದಸ್ಯ ದೀಪಕ ಭಟ್ಟ ನಿರೂಪಿಸಿದರು. ಗ್ರಾ.ಪಂ.ಅಧ್ಯಕ್ಷ ಸುಬ್ಬಣ್ಣ ಕುಂಟೆಗಾಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು, ರಾಘು ಕುಣಬಿ ವಂದಿಸಿದರು.