ವಾರ್ಷಿಕ ಸಭೆ ಸಂಪನ್ನ: ಸನ್ಮಾನ ಸ್ವೀಕರಿಸಿದ ಎನ್.ಎಸ್.ಹೆಗಡೆ
ಅಂಕೋಲಾ: ತಾಲೂಕಿನ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ 74 ನೇ ವಾರ್ಷಿಕ ಸರ್ವಸಾಧಾರಣ ಸಭೆಯು ರಾಮನಗುಳಿ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಸಂಘವು ಈ ಬಾರಿ 10,24,399 ನಿವ್ವಳ ಲಾಭವನ್ನು ಹೊಂದಿದೆ.
ಇದಕ್ಕೂ ಪೂರ್ವ 36 ವರ್ಷಗಳ ಕಾಲ ಆರ್.ಜಿ.ಎಸ್.ಎಸ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಎಸ್.ಎನ್ ಹೆಗಡೆ ಅವರಿಗೆ ಆಡಳಿತ ಮಂಡಳಿ ಹಾಗೂ ಊರ ನಾಗರಿಕರಿಂದ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಕಾರ್ಯಕ್ರಮದಲ್ಲಿ ಯಲ್ಲಾಪುರ- ಮುಂಡಗೋಡ ಕ್ಷೇತ್ರದ ಶಾಸಕರು, ಕೆಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಶಿವರಾಮ ಹೆಬ್ಬಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹಕಾರಿ ಸಂಘದ ಆರೋಗ್ಯವನ್ನು ಕೆಲವು ಅಂಶಗಳಿಂದ ಗುರುತಿಸಲಾಗುತ್ತದೆ. ಸಂಸ್ಥೆಯ ಸಾಲದ ವಸೂಲಾತಿ, ಸಂಸ್ಥೆಯ ಕಟ್ಟುಬಾಕಿ ಪ್ರಮಾಣದ ಕಡಿಮೆಯಾಗುವಿಕೆ, ರೈತಾಪಿ ಸಮುದಾಯ ಹಾಗೂ ಕೃಷಿಯೇತರ ಸಾಲ ನೀಡುವಿಕೆ ಅದರ ವಸೂಲಾತಿ ಆಧಾರದ ಮೇಲೆ ಸಂಸ್ಥೆಯ ಆರೋಗ್ಯವನ್ನು ಪರೀಕ್ಷೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ರಾಮನಗುಳಿ ಸೊಸೈಟಿ 75 ವರ್ಷದ ಹೊಸ್ತಿಲಲ್ಲಿದ್ದು ಲಾಭದಾಯಕ ಸಂಸ್ಥೆಯಾಗಿ ಬೆಳೆದು ನಿಂತಿರುವುದು ಸಂತಸ ತಂದಿದೆ. ಸಂಸ್ಥೆಯಲ್ಲಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾದ ಎಸ್.ಎನ್ ಹೆಗಡೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಸ್.ಎನ್.ಹೆಗಡೆ ದಶಕಗಳ ಕಾಲ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಿದ್ದು ನನಗೆ ಖುಷಿ ತಂದಿದೆ. ಸಿಬ್ಬಂದಿಗಳು, ಆಡಳಿತ ಮಂಡಳಿ, ಸುತ್ತಮುತ್ತಲಿನ ಗ್ರಾಮದ ಜನರು ನೀಡಿದ ಪ್ರೀತಿ, ವಿಶ್ವಾಸದಿಂದ ಸುದೀರ್ಘ ಸೇವೆ ಸಲ್ಲಿಸಲು ಸಾಧ್ಯವಾಯಿತು. ನಿಮ್ಮ ಪ್ರೀತಿ ಇದೇ ರೀತಿ ಮುಂದೆಯೂ ಬಯಸುತ್ತೇನೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಬಾಬು ಸುಂಕೇರಿ, ಪ್ರಭಾರಿ ಸಹಕಾರ ಸಂಘಗಳ ಉಪನಿಬಂಧಕರಾದ ಜಿ.ಕೆ. ಭಟ್ಟ ಉಪಸ್ಥಿತರಿದ್ದು ಮಾತನಾಡಿದರು. ಸಂಘದ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ವೈದ್ಯ ವಹಿಸಿದ್ದರು. ವೇದಿಕೆ ಮೇಲೆ ಸುಂಕಸಾಳ ಗ್ರಾ.ಪಂ ಅಧ್ಯಕ್ಷೆ ರಮೀಜಾ ಸೈಯದ್, ಡೋಂಗ್ರಿ ಗ್ರಾ.ಪಂ ಅಧ್ಯಕ್ಷ ವಿನೋದ ಭಟ್ಟ ಇದ್ದರು. ನಿರ್ದೇಶಕ ಸಂತೋಷ ಭಟ್ಟ ಸ್ವಾಗತಿಸಿದರು. ನಿರ್ದೇಶಕ ಆನಂದ ನಾಯ್ಕ ಸನ್ಮಾನ ಪತ್ರ ವಾಚಿಸಿದರು. ಗೌರೀಶ ವೈದ್ಯ ಪ್ರಾಸ್ತಾವಿಕ ಮಾತನಾಡಿದರು. ಶಶಾಂಕ ಹೆಗಡೆ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರುಗಳು, ಸಿಬ್ಬಂದಿಗಳು, ಊರ ನಾಗರಿಕರು ಉಪಸ್ಥಿತರಿದ್ದರು.