ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 6 ಲಕ್ಷದ 85ಸಾವಿರ ರೂಗಳಷ್ಟು ನಿವ್ವಳ ಲಾಭಹೊಂದಿದ್ದು ಸಂಘದ ಬೆಳವಣಿಗೆಗೆ ಪರಸ್ಪರ ಸಹಕಾರ ಮುಖ್ಯ ಎಂದು ಸಂಘದ ಅಧ್ಯಕ್ಷ ಮಹಾಬಲೇಶ್ವರ ದೇವರು ಭಟ್ಟ ಅಗ್ಗೇರೆ ಹೇಳಿದರು.
ಸಂಘದ ನಿವೇಶನದ ಗೋದಾಮಿನಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಶುಕ್ರವಾರ ಮಾತನಾಡಿದರು. ಸಂಘದ ಸದಸ್ಯರು ಪತ್ತು ಮಾರಾಟ ಜೋಡಣೆಯಲ್ಲಿ ಹೆಚ್ಚೆಚ್ಚು ಪಾಲ್ಗೊಂಡು ವ್ಯವಹಾರ ನಡೆಸಿ ಸಂಘದಲ್ಲಿನ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು. ಸಂಘದಲ್ಲಿ 891 ಸದಸ್ಯರಿದ್ದು 1ಕೋಟಿ 28ಲಕ್ಷದ 51ಸಾವಿರದ 230ರೂಗಳಷ್ಟು ಷೇರು ಬಂಡಾಳ ಹೊಂದಿದೆ. 2ಕೋಟಿ 4ಲಕ್ಷದ 27ಸಾವಿರ 767ರೂಗಳಷ್ಟು ಠೇವನ್ನು ಹೊಂದಿದೆ. ಸಂಘದ ಸದಸ್ಯರ ಹಿತದೃಷ್ಠಿಯಿಂದ ಸಾಮಾನ್ಯ ಸೇವಾ ಕೇಂದ್ರ, ಆರ್‌ಟಿಜಿಎಸ್ ಹಾಗೂ ನೆಪ್ಟ್ ಸೇವೆ ನೀಡಲಾಗುತ್ತಿದೆ ಎಂದು ಹೇಳಿದರು.
ಸದಸ್ಯರ ಆಗ್ರಹ: ರೈತರ ಅನುಕೂಲಕ್ಕಾಗಿ ಬಾಡಿಗೆ ಆಧಾರಿತ ಭೂಮಿಕಾ ಕೃಷಿ ಸೇವಾ ಕೇಂದ್ರದ ಮೂಲಕ ರೈತರಿಗೆ ಕೃಷಿ ಸಲಕರಣೆಗಳನ್ನು ನೀಡುವ ಯೋಜನೆ ಹಾಗೂ ಅಡಕೆ ಕೊಳೆ ರೋಗ ಮತ್ತು ಇತ್ತೀಚಿಗೆ ತೀವ್ರಗತಿಯಲ್ಲಿ ಹರಡುತ್ತಿರುವ ಎಲೆ ಚುಕ್ಕಿ ರೋಗ ಹಾಗೂ ಕಳಪೆ ಅಡಕೆ ಆಮದು ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಲು ರೈತ ಸದಸ್ಯರು ಆಗ್ರಹಿಸಿದರು.
ಇದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯವರು ಮನವಿಗೆ ರೈತ ಸದಸ್ಯರ ಸಹಿ ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ರೈತರ ಸಂಕಷ್ಟಕ್ಕೆ ನಾವು ಯಾವತ್ತೂ ಸ್ಪಂದಿಸುತ್ತೇವೆ ಎಂದು ಹೇಳಿದರು.
ನಿರ್ದೇಶಕರಾದ ಎ.ಜಿ.ಹೆಗಡೆ ಹಿರೇಕೈ, ಎ.ಆರ್.ಹೆಗಡೆ ಹೀನಗಾರ, ನಾಗರಾಜ ಹೆಗಡೆ ಹುಲಿಮನೆ, ಮಂಜುನಾಥ ನಾಯ್ಕ ತೆಂಗಿನಮನೆ, ವಿ.ಎಚ್.ಗೌಡ ಮಾದ್ಲಮನೆ, ಸುಮಾ ಹೆಗಡೆ ಹೊನ್ನೆಹದ್ದ, ನಾಗರಾಜ ಹೆಗಡೆ ಹೊಲಗದ್ದೆ, ಸುಧಾಕರ ಹರಿಜನ ಹೊನ್ನೆಹದ್ದ ಉಪಸ್ಥಿತರಿದ್ದರು.
ಸನ್ಮಾನ: ಇದೇ ಸಂದರ್ಭದಲ್ಲಿ ಸಂಘದ ಮೂಲಕ 2023-24ನೇ ಸಾಲಿನಲ್ಲಿ ಹೆಚ್ಚು ಮಹಸೂಲು ವಿಕ್ರಿಮಾಡಿದ ಸದಸ್ಯರಾದ ಭಾಸ್ಕರ ಸೂರಪ್ಪ ಹೆಗಡೆ ಅರಿಶಿನಗೋಡ, ಶ್ರೀಪಾದ ರಾಮ ಭಟ್ಟ ತಟ್ಟೀಸರ ಹಾಗೂ ಹುಲಿಯಾ ನಾರಾಯಣ ಗೌಡ ಕಲ್ಮನೆ ಇವರನ್ನು ಸನ್ಮಾನಿಸಲಾಯಿತು.
ಸುಮಾ ಹೆಗಡೆ ಪ್ರಾರ್ಥನೆ ಹಾಡಿದರು. ನಿರ್ದೇಶಕ ಅನಂತ ಹೆಗಡೆ ಗೊಂಟನಾಳ ಸ್ವಾಗತಿಸಿ ಪಾಸ್ಥಾವಿಕ ಮಾತನಾಡಿದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ ಕೃಷ್ಣ ಹೆಗಡೆ ವರದಿ ವಾಚಿಸಿದರು. ಉಪಾಧ್ಯಕ್ಷೆ ಇಂದಿರಾ ಜಿ.ಹೆಗಡೆ ವಂದಿಸಿದರು. ಅನಂತ ಹೆಗಡೆ ಹೊಸಗದ್ದೆ ನಿರ್ವಹಿಸಿದರು. ಸಿಬ್ಬಂದಿಗಳು ಸಹಕರಿಸಿದರು.