ದಾಂಡೇಲಿ : ನಗರದ ಲಿಂಕ್ ರಸ್ತೆಯಲ್ಲಿ ಸರಣಿ ಕಳ್ಳತನ ನಡೆದ ಘಟನೆ ಗುರುವಾರ ನಸುಕಿನ ವೇಳೆಯಲ್ಲಿ ನಡೆದಿದ್ದು, ನಗರ ಠಾಣೆಯ ಪೊಲೀಸರು ಹಾಗೂ ಶ್ವಾನದಳದವರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.
ನಗರದ ಲಿಂಕ್ ರಸ್ತೆಯಲ್ಲಿರುವ ಅಭಿಷೇಕ್ ಕಾಳೆ ಮಾಲಕತ್ವದ ಮೆಡಿಕಲ್ ಅಂಗಡಿಗೆ ಅಂಗಡಿಯ ಮೇಲ್ಚಾವಣಿಯ ಶೀಟ್ ಒಡೆದು ಒಳ ನುಗ್ಗಿರುವ ಕಳ್ಳರು, ಅಂಗಡಿಯೊಳಗಿದ್ದ ನಗದು 4 ಲಕ್ಷ ರೂಪಾಯಿ ಮತ್ತು ಚಿನ್ನದ ಆಭರಣಗಳನ್ನು ಕಳವು ಮಾಡಿದ್ದಾರೆ.
ಇದೇ ಕಟ್ಟಡದಲ್ಲಿರುವ ಪಕ್ಕದ ಶರಣ್ ಸಿ. ಅರಳಿ ಕಿರಾಣಿ ಅಂಗಡಿಗೂ ನುಗ್ಗಿರುವ ಕಳ್ಳರು ಅಲ್ಲಿ 45 ರಿಂದ 50 ಸಾವಿರ ರೂಪಾಯಿ ನಗದನ್ನು ದೋಚಿದ್ದಾರೆ.
ಇನ್ನೂ ಇಲ್ಲೇ ಹತ್ತಿರದಲ್ಲಿರುವ ವಿಷ್ಣು ಕಲಾಲ್ ನಡೆಸುತ್ತಿರುವ ಮೈಲಾರ ವೈನ್ ಸೆಂಟರಿಗೆ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ಅಲ್ಲಿಯೂ ಸರಿ ಸುಮಾರು 35 ಸಾವಿರ ನಗದನ್ನು ಹಾಗೂ ವಿವಿಧ ಮದ್ಯದ ಬಾಟಲಿಗಳನ್ನು ಕಳವುಗೈದ್ದಿದ್ದಾರೆ.
ಮೈಲಾರ ವೈನ್ ಸೆಂಟರಿನ ಮುಂಭಾಗದಲ್ಲಿರುವ ಕಿರಣ್ ಕರಡಿ ಅವರ ಎಲ್ ಜಿ ಕಿರಾಣಿ ಅಂಗಡಿಗೂ, ಅಂಗಡಿಯ ಮೇಲ್ಚಾವಣಿ ಶೀಟ್ ಒಡೆದು ರೂ : 2,000/- ನಗದನ್ನು ಕಳವು ಮಾಡಿದ್ದಾರೆ.
ಮೈಲಾರ ವೈನ್ ಸೆಂಟರಿಗೆ ನುಗ್ಗಿ ಕಳುವು ಮಾಡುತ್ತಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುರುವಾರ ನಸುಕಿನ ವೇಳೆ ಸುಮಾರು ಎರಡುವರೆ ಗಂಟೆಯಿಂದ ನಾಲ್ಕು ಗಂಟೆಯ ಒಳಗಡೆ ಈ ಕಳ್ಳತನ ಕೃತ್ಯ ನಡೆದಿದೆ ಎನ್ನಲಾಗಿದೆ. ಗುರುವಾರ ಬೆಳಿಗ್ಗೆ ಎಂದಿನಂತೆ ತಮ್ಮ ತಮ್ಮ ಅಂಗಡಿಗಳಿಗೆ ಬಂದ ಮಾಲಕರಿಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ತಕ್ಷಣವೇ ಕಳ್ಳತನದ ಬಗ್ಗೆ ದಾಂಡೇಲಿ ನಗರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಲಾಗಿದೆ. ನಗರ ಠಾಣೆಯ ಪೊಲೀಸರು ಕಳ್ಳತನವಾಗಿರುವ ಅಂಗಡಿಗಳಿಗೆ ತೆರಳಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಭೇಟಿ ನೀಡಿದೆ. ಸರಣಿ ಕಳ್ಳತನ ನಡೆದಿರುವುದು ನಗರದ ಜನತೆಯಲ್ಲಿ ಆತಂಕ ಮೂಡಿಸಿದೆ.