ಶಿರಸಿ: ತಾಲೂಕಿನ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ರಾಗಮಿತ್ರ ಪ್ರತಿಷ್ಠಾನ ಹಾಗೂ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಹಯೋಗದಲ್ಲಿ ಸಂಘಟಿಸಲಾಗಿದ್ದ ಗುರು ಅರ್ಪಣೆ-ಕಲಾನುಬಂಧ ಸಂಗೀತ ಕಾರ್ಯಕ್ರಮದ ಮಹಾಸಮರ್ಪಣೆ ಅತ್ಯಂತ ಭಕ್ತಿಭಾವಪೂರ್ಣವಾಗಿ ನಡೆಯಿತು.
ಸ್ವರ್ಣವಲ್ಲೀಯ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯ 33ನೆಯ ಪೀಠಾರೋಹಣದ ಅಂಗವಾಗಿ ಶಿರಸಿ ಯೋಗ ಮಂದಿರದ ಸರ್ವಜ್ಞೇಂದ್ರ ಸಭಾಭವನದಲ್ಲಿ ಒಂದು ವರ್ಷ ನಿರಂತರ ಪ್ರತಿ ತಿಂಗಳದ ಮೊದಲ ಸೋಮವಾರದಂದು ಕಲಾ ಅನುಬಂಧ ಸಂಗೀತ ಕಾರ್ಯಕ್ರಮ ಹಾಗೂ ಪ್ರತಿ ಕಾರ್ಯಕ್ರಮದಲ್ಲೂ ಇಬ್ಬರು ಸಾಧಕ ಕಲಾವಿದರಿಗೆ ಸನ್ಮಾನ ಸಮಾರಂಭ ನಡೆಸಿಕೊಂಡು ಬರಲಾಗಿತ್ತು. ಆ ಪ್ರಯುಕ್ತ ಎಲ್ಲ ಕಾರ್ಯಕ್ರಮ ಸೇರಿ ಶ್ರೀಗಳಿಗೆ ಸಮರ್ಪಿಸುವ ಸಲುವಾಗಿ ಪೂರ್ತಿ ದಿನ ಸಂಗೀತ ಕಾರ್ಯಕ್ರಮ ಏರ್ಪಡಿಸಿ, ಮಹಾ ಸಮರ್ಪಣೆ ಮೂಲಕ ಸಮರ್ಪಿಸಲಾಯಿತು. ಇದೇ ಸಂದರ್ಭದಲ್ಲಿ ಪ್ರತಿಯೊಂದು ಹಂತದಲ್ಲಿ ಕಾರ್ಯಕ್ರಮ ನಿರೂಪಿಸಿ ಯಶಸ್ವಿಗೊಳಿಸಿ, ನಿರೂಪಕ ಹಾಗೂ ಪತ್ರಕರ್ತ ಗಿರಿಧರ ಕಬ್ನಳ್ಳಿ ಅವರಿಗೆ “ಸಮರ್ಥ ಸಭಾ ನಿರ್ವಾಹಕ” ದೊಂದಿಗೆ ಶ್ರೀಗಳ ಅಮೃತ ಹಸ್ತದಿಂದ ಗೌರವಿಸಲಾಯಿತು.
ಇದಕ್ಕೂ ಪೂರ್ವಭಾವಿಯಾಗಿ ಬೆಳಿಗ್ಗೆಯಿಂದಲೇ ಆರಂಭಗೊಂಡ ಸಂಗೀತ ಸುಧೆಯಲ್ಲಿ ಜಿಲ್ಲೆಯ ಹಿರಿಯ ಸಂಗೀತ ಕಲಾವಿದರಾದ ಡಾ.ಅಶೋಕ ಹುಗ್ಗಣ್ಣವರ್ ತಮ್ಮ ಸಂಗೀತ ಕಛೇರಿ ನಡೆಸಿಕೊಡುತ್ತ ಭಕ್ತಪೂರ್ವಕ ಹಾಡುಗಳನ್ನು ಹಾಡಿದರು. ಹುಗ್ಗಣ್ಣನವರ್ ಗಾನಸುಧೆಗೆ ತಬಲಾದಲ್ಲಿ ಪಂ. ಅಲ್ಲಮಪ್ರಭು ಕಡಕೋಳ, ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ ಸಹಕರಿಸಿದರು. ಮೊದಲ ಅಧಿವೇಶನದ ಪ್ರಥಮ ಕಾರ್ಯಕ್ರಮವಾಗಿ ಸಂಗೀತವನ್ನು ಡಾ.ಕೃಷ್ಣಮೂರ್ತಿ ಭಟ್ಟ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ತಬಲಾದಲ್ಲಿ ಎಂಜಿ.ಭಟ್ಟ ನೆಬ್ಬೂರ, ಸಂವಾದಿನಿಯಲ್ಲಿ ಪ್ರಕಾಶ ಹೆಗಡೆ ಸಹಕರಿಸಿದರು.
ನಂತರ ನಡೆದ ಮಹಾಸಮರ್ಪಣೆ ಸಂಗೀತದಲ್ಲಿ ಗಾಯಕಿ ತೇಜಸ್ವಿನಿ ವೆರ್ಣೇಕರ ವಾರಣಾಸಿ ತಮ್ಮ ಗಾನಸುಧೆಯನ್ನು ಹರಿಸಿದ್ದು, ಅವರ ಗಾನಕ್ಕೆ ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ಹಾರ್ಮೋನಿಯಂನಲ್ಲಿ ಭರತ ಹೆಗಡೆ ಹೆಬ್ಬಲಸು ಸಾಥ್ ನೀಡಿದರು. ನಂತರದ ಗಾಯನದಲ್ಲಿ ಮಾಬ್ಲೇಶ್ವರ ಹೆಗಡೆ ಮೂರೂರು, ಸಂವಾದಿನಿಯಲ್ಲಿ ಭರತ ಹೆಗಡೆ, ತಬಲಾದಲ್ಲಿ ಎಂ.ಜಿ.ಭಟ್ಟ ಸಹಕರಿಸಿದರು. ಬೆಳಿಗ್ಗೆ ನಡೆದ ಎಲ್ಲ ಗಾಯಕರ ಗಾನದಲ್ಲಿ ಹಿನ್ನೆಲೆ ತಂಬೂರಾದಲ್ಲಿ ರಾಘು ಭಟ್ಟ, ಮಮತಾ ಹಾಗೂ ತಿವಿಕ್ರಮ ಸಹಕರಿಸಿದರು.
ಮಧ್ಯಾಹ್ನ ಸಭೆ ಪೂರ್ವದಲ್ಲಿ ಎರಡನೆಯ ಅಧಿವೇಶನದಲ್ಲಿ ಸ್ವರ್ಣವಲ್ಲೀ ಮಾತೃವೃಂದದ ಮಾತೆಯರು ಭಕ್ತಿ ಸಂಗೀತ ನಡೆಸಿಕೊಟ್ಟರು. ತಬಲಾದಲ್ಲಿ ಕಿರಣ ಹೆಗಡೆ ಕಾನಗೋಡ, ಹಾರ್ಮೋನಿಯಂನಲ್ಲಿ ಅಜಿತ್ ಭಟ್ಟ ಸಹಕರಿಸಿದರು. ನಂತರ ಸಭೆಯಲ್ಲಿ ಶ್ರೀಗಳು ಮಹಾಸಮರ್ಪಣೆ ಮತ್ತು ಸಂಗೀತ ಸಂಘಟನೆ ಕುರಿತು ಆಶೀರ್ವನ ನೀಡುತ್ತ ಮೆಚ್ಚುಗೆ ವ್ಯಕ್ತಪಡಿಸಿದರು.
ರಾಗಮಿತ್ರ ಪ್ರತಿಷ್ಠಾನದ ಅಧ್ಯಕ್ಷ ಎಂ.ಎನ್.ಹೆಗಡೆ ಮಾನೇನಳ್ಳಿ ಹಾಗೂ ವಿದ್ವಾನ್ ಪ್ರಕಾಶ ಹೆಗಡೆ ದಂಪತಿ ಸಮೇತ ಫಲ ಸಮರ್ಪಿಸಿದರೆ, ಪ್ರಕಾಶ ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ವಿ. ನಾಗೇಂದ್ರ ಭಟ್ಟ ಹಿತ್ಲಳ್ಳಿ ರಚಿಸಿದ ಭಕ್ತಿಪೂರ್ವಕ ಸಾಹಿತ್ಯವನ್ನು ಸಂಯೋಜಿಸಿ, ಪ್ರಸ್ತುತಗೊಳಿಸಿದರು. ವೇದಿಕೆಯಲ್ಲಿ ಆರ್.ಎನ್.ಭಟ್ಟ ಸುಗಾವಿ ಇದ್ದರು. ನಂತರ ಮಹಾಸಮರ್ಪಣೆ ಅಂಗವಾಗಿ ನಡೆದ ಜುಗಲ್‌ಬಂಧಿ ಕಾರ್ಯಕ್ರಮದಲ್ಲಿ ಖ್ಯಾತ ಕೊಳಲು ವಾದಕ ದೀಪಕ ಹೆಬ್ಬಾರ್ ಕುಂದಾಪುರ ಕೊಳಲಿನಲ್ಲಿ, ಹಾರ್ಮೋನಿಯಂನಲ್ಲಿ ವಿ.ಪ್ರಕಾಶ ಹೆಗಡೆ ಯಡಳ್ಳಿ ಮತ್ತು ತಬಲಾದಲ್ಲಿ ಗುರುರಾಜ ಹೆಗಡೆ ಆಡುಕಳ, ತ್ರಿಗಲ್‌ಬಂಧಿ ವಾದನದ ಸಂಗೀತದ ಹೊನಲು ಪ್ರಸ್ತುತಗೊಳಿಸಿದರು.
ಗುರುಅರ್ಪಣೆಯ ಕೊನೆಯ ಕಾರ್ಯಕ್ರಮವಾಗಿ ನಡೆದ ಭರತನಾಟ್ಯ ಪ್ರದರ್ಶನದಲ್ಲಿ ಕುಮಾರಿ ಅಮೃತಾ ಪೈ ತಮ್ಮ ನಾಟ್ಯ ಪ್ರದರ್ಶನ ಸಮರ್ಪಣೆ ಮಾಡುತ್ತ ಮಹಾಸಮರ್ಪಣೆ ಸಮಾಪ್ತಿಗೊಳಿಸಿದರು. ಸನ್ಮಾನಿತ ಗಿರಿಧರ ಕಬ್ನಳ್ಳಿ ಎಲ್ಲ ಕಾರ್ಯಕ್ರಮಗಳನ್ನು ಸಮರ್ಥವಾಗಿ ನಿರೂಪಿಸಿದರು.