ಶಿರಸಿ: ಹಿಂದಿ ಎಂಬುದು ಕೇವಲ ಭಾಷೆಯಷ್ಟೇ ಅಲ್ಲ. ಅದೊಂದು ಭಾವನೆ, ಅದು ನಮ್ಮ ಸಂಸ್ಕೃತಿಯ ಪ್ರತೀಕವೆಂದು ಹಿಂದಿ ವಿಭಾಗದ ಡಾ. ಸುಜಾತಾ ಪಿ. ಹೇಳಿದರು.
ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಹಿಂದಿ ವಿಭಾಗದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಹಿಂದಿ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಒಬ್ಬರು ಇನ್ನೊಬ್ಬರನ್ನು ಪ್ರೇರೇಪಿಸಲು, ಯುವ ಪೀಳಿಗೆಗೆ ಭಾಷೆಯ ಕುರಿತು ಜಾಗೃತಿ ಮೂಡಿಸಲು ಹಿಂದಿ ದಿನವನ್ನು ಆಚರಿಸುತ್ತಿದ್ದೇವೆ. ಹಿಂದಿ ಭಾಷೆಯನ್ನು ವಿಶ್ವಮಟ್ಟದಲ್ಲಿ ಪ್ರಚಾರಪಡಿಸುವುದೂ ಹಿಂದಿ ದಿನದ ಪ್ರಮುಖ ಉದ್ದೇಶವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಪ್ರೊ.ಜಿ.ಟಿ.ಭಟ್ ಮಾತನಾಡಿ, ಕೆಲವರು ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎನ್ನುತ್ತಾರೆ, ಕೆಲವರು ರಾಷ್ಟ್ರ ಭಾಷೆಯಲ್ಲ ಎನ್ನುತ್ತಾರೆ. ಆದರೆ ಭಾಷೆಗಳ ಮಧ್ಯೆ ಸಂಘರ್ಷ ಏರ್ಪಡಬಾರದು. ಭಾಷೆ ಎಂಬುದು ಭಾವನೆಗಳ ವಿನಿಮಯಕ್ಕೆ ಇರುವ ಮಾರ್ಗವಾಗಿದೆ. ಯಾವುದೇ ಭಾಷೆ ಶ್ರೇಷ್ಠ ಕನಿಷ್ಠ ಎಂಬುದಿಲ್ಲ. ಎಲ್ಲಾ ಭಾಷೆಯನ್ನು ನಾವು ಗೌರವಿಸಬೇಕು ಎಂದರು.
ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣೇಶ್ ಹೆಗಡೆ ಮಾತನಾಡಿ ಮಾತೃ ಭಾಷೆಯೊಂದಿಗೆ ಇತರ ಹೆಚ್ಚಿನ ಭಾಷೆಗಳನ್ನು ಕಲಿತಾಗ ಸಮಾಜದೊಂದಿಗೆ ಹೊಂದಿಕೊಂಡು ಬದುಕುವುದು ಸುಲಭವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ತನುಸುಮ್ ತಿಳವಲ್ಲಿ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಘವೇಂದ್ರ ಹೆಗಡೆ, ಸಂಗೀತ ವಿಭಾಗ ಮುಖ್ಯಸ್ಥ ಡಾ. ಕೆ.ಜಿ.ಭಟ್ ಉಪಸ್ಥಿತರಿದ್ದರು. ಜಿ. ಸ್ನೇಹ ಸ್ವಾಗತಿಸಿದರು, ಸುಮಂತ್ ವಂದಿಸಿದರು