ಶಿರಸಿ: ಜಗತ್ತಿನಲ್ಲಿ ಇಂಧನದ ಪರಿಚಯವೇ ಇಲ್ಲದ ಕಾಲದಲ್ಲಿ, ಜೈವಿಕ ಇಂಧನವನ್ನು ಉತ್ಪಾದಿಸಿ ಉಪಯೋಗಿಸುತ್ತಿದ್ದ ದೇಶ ನಮ್ಮ ಭಾರತ. ಈ ಮಣ್ಣಿನಲ್ಲಿಯೇ ಅಂತಹ ಸತ್ವವಿದೆ. ಆದರೆ ಈಗ ಭೂಮಿ ಅಗೆದು ಇಂಧನ ತೆಗೆಯುತ್ತಿರುವ ಕಾಲ. ಮುಗಿದುಹೋಗುವ ಖನಿಜ ನಿಕ್ಷೇಪಗಳ ಬದಲಾಗಿ ನಮ್ಮ ಸುತ್ತಮುತ್ತಲಿನ ವಸ್ತುಗಳನ್ನು ಇಂಧನ ಶಕ್ತಿಯನ್ನಾಗಿಸುವುದರ ಕುರಿತು ಹೆಚ್ಚಿನ ಗಮನ ನೀಡಬೇಕಿದೆ ಎಂದು ಜೈವಿಕ ಇಂಧನ ಅಭಿವೃದ್ಧಿ ತಜ್ಞ ಸಮಿತಿ ಮಾಜೀ ಅಧ್ಯಕ್ಷ ವೈ.ಬಿ.ರಾಮಕೃಷ್ಣ ಹೇಳಿದರು.
ಅವರು ಕದಂಬ ಮಾರ್ಕೆಟಿಂಗ್ನಲ್ಲಿ ನಡೆದ ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಭೂಮಿಯಡಿಯಲ್ಲಿನ ಖನಿಜ ಸಂಪತ್ತು ನಿಗದಿತ ಸಮಯದವರೆಗಷ್ಟೇ ಬಳಕೆ ಮಾಡಲು ಸಾಧ್ಯ. ಇತ್ತೀಚೆಗೆ ಭೂಮಿಯ ಒಡಲು ಬರಿದಾಗುತ್ತಿದ್ದು, ನಮ್ಮ ದೇಶದಲ್ಲಿ ಉಪಯೋಗಿಸುತ್ತಿರುವ ಇಂಧನವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿನ ಜೈವಿಕ ಸಂಪತ್ತನ್ನೇ ಬಳಸಿಕೊಂಡು ಇಂಧನ ತಯಾರಿಸಿ ಸ್ವಾವಲಂಬಿಗಳಾಗಬೇಕಿದೆ. ಜೈವಿಕ ಇಂಧನ ಬಳಕೆಯಿಂದ ಪರಿಸರ ರಕ್ಷಣೆಯೂ ಸಹ ಸಾಧ್ಯವಿದೆ. ಪಾರಂಪರಿಕ ಕೃಷಿ ಪದ್ಧತಿ, ಹೈನುಗಾರಿಕೆಯಿಂದ ರೈತರು ವಿಮುಖರಾಗದೇ ಇದ್ದಲ್ಲಿ ಜೈವಿಕ ಇಂಧನ ಶಕ್ತಿಯನ್ನು ವ್ಯಾಪಕವಾಗಿ ಬಳಸಲು ಯೋಗ್ಯವಾಗುವಂತಹ ಯೋಜನೆಗಳನ್ನು ರೂಪಿಸಬಹುದಾಗಿದೆ. ಗೋಬರ್ ಗ್ಯಾಸ್ ಘಟಕ ಸ್ಥಾಪನೆಗೆ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಗೋಬರ್ ಗ್ಯಾಸ್ನಲ್ಲಿರುವ ಹೆಚ್ಚಿನ ಕಾರ್ಬನ್ ಡೈ ಆಕ್ಸೈಡ್ ಹಾಗೂ ಇನ್ನಿತರ ಆಕ್ಸೈಡ್ ಪ್ರಮಾಣವನ್ನು ಹೊರಹಾಕುವುದರಿಂದ ಎಲ್ಪಿಜಿ, ಎಲ್ಎನ್ಜಿಗಳಂತೆ ಕಂಪ್ರೆಸ್ಡ್ ಗ್ಯಾಸ್ ಆಗಿ ಪರಿವರ್ತಿಸಬಹುದಾಗಿದೆ. ತ್ಯಾಜ್ಯವೆಂದು ಬಿಸಾಡುವ ಅಡಿಕೆ ಸಿಪ್ಪೆಯನ್ನು ಇಂಧನವನ್ನಾಗಿ ಪರಿವರ್ತಿಸಬಹುದಾಗಿದೆ. ಆದ್ದರಿಂದ ಕೃಷಿ, ಹೈನುಗಾರಿಕೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುವುದರ ಮೂಲಕ ಪರೋಕ್ಷವಾಗಿ ಜೈವಿಕ ಇಂಧನದ ಉತ್ಪಾದನೆಗೂ ಅವಕಾಶವಾಗುವಂತೆ ಸೂಕ್ತ ಯೋಜನೆಗಳು ಜಾರಿಗೆ ಬರುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಅರಣ್ಯ ಉಪಸಂರಕ್ಷಣಾಧಿಕಾರಿ ಡಾ.ಅಜ್ಜಯ್ಯ ಮಾತನಾಡಿ, ಜಿಲ್ಲೆಯ ಎಲ್ಲಾ ಅರಣ್ಯ ವಲಯಗಳಲ್ಲಿ ಗ್ರಾಮ ಅರಣ್ಯ ಸಮಿತಿ ರಚಿಸಲಾಗಿದ್ದು, ಅರಣ್ಯ ಸಂರಕ್ಷಣೆ, ವನ್ಯಜೀವಿಗಳ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಾಡುಪ್ರಾಣಿಗಳ ಹಾವಳಿಯಿಂದ ರೈತನ ಬೆಳೆಗಳನ್ನು ಕಾಪಾಡುವ ನಿಟ್ಟಿನಲ್ಲೂ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಬಹಳಷ್ಟು ಕಡೆ ಕಟ್ಟಿಗೆಯ ನೆಪದಲ್ಲಿ ಮರಗಳ ನಾಶವಾಗುತ್ತಿದೆ. ಬಯೋ ಗ್ಯಾಸ್ಗಳ ಬಳಕೆಯಿಂದ ಅರಣ್ಯಗಳನ್ನು ಸಂರಕ್ಷಿಸಬಹುದಾಗಿದ್ದು, ಬಯೋ ಗ್ಯಾಸ್ಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದರು.
ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಪ್ರಾಸ್ತಾವಿಕವಾಗಿ ಮಾತನಾಡಿ ವೃಕ್ಷಲಕ್ಷ ಆಂದೋಲನ, ಪಶ್ಚಿಮ ಘಟ್ಟ ಕಾರ್ಯಪಡೆ ಮೂಲಕ ಹಲವಾರು ಯೋಜನೆಗಳು ಕಾರ್ಯರೂಪಕ್ಕೆ ಬಂದಿದ್ದವು. ಗೋಬರ್ ಗ್ಯಾಸ್, ಅಸ್ತ್ರ ಒಲೆಗ್ರಾಮ, ಸೋಲಾರ್ ಗ್ರಾಮ ಹೀಗೆ ಮಲೆನಾಡಿನ 8 ಜಿಲ್ಲೆಗಳಲ್ಲಿ ಮಾದರಿ ಇಂಧನ ಸ್ವಾವಲಂಬೀ ಗ್ರಾಮಗಳ ಪ್ರಯೋಗಗಳು ನಡೆದಿದ್ದವು. ಹಸಿರು ಹಳ್ಳಿ ಯೋಜನೆ, ವನವಾಸಿ ಹಳ್ಳಿಗಳ ಅಸ್ತ್ರ ಒಲೆ ಯೋಜನೆ, ಸೋಲಾರ್ ಬೇಲಿ ಯೋಜನೆ, 200ಕಿ.ಮೀ. ಉದ್ದದ ಸಮುದ್ರದಂಚಿನಲ್ಲಿ ಸುರಹೊನ್ನೆಯಂತಹ ಜೈವಿಕ ಇಂಧನ ಸಸ್ಯಗಳನ್ನು ಬೆಳೆಸುವ ಹಸಿರು ಗೋಡೆ ಯೋಜನೆಗಳು ಯಶಸ್ಸನ್ನು ಕಂಡಿದೆ.
ಆದರೆ ಈಗಿನ ಪರಿಸ್ಥಿತಿಯಲ್ಲಿ ಕೃಷಿ ಪದ್ಧತಿಗಳು, ಹೈನುಗಾರಿಕೆಗಳು ಕಡಿಮೆಯಾಗುತ್ತಿರುವ ಕಾರಣ ಇಂಧನ ಶಕ್ತಿಯ ಕೊರತೆಯನ್ನು ಎದುರಿಸಬೇಕಾಗಿದೆ. ಸಹಕಾರಿ ಸಂಘಗಳು, ಇಂಧನ ಇಲಾಖೆ,ಡಿಸಿಸಿ ಬ್ಯಾಂಕ್ಗಳು ಸಬ್ಸಿಡಿ ಸಹಾಯ ನೀಡುವುದರ ಮೂಲಕ ಈ ಸವಾಲನ್ನು ಎದುರಿಸಬಹುದಾಗಿದೆ. ಸರ್ಕಾರ ಏಕಗವಾಕ್ಷಿ ಯೋಜನೆಯನ್ನು ಜಾರಿಗೆ ತರಬೇಕಾಗಿದೆ. ಅರಣ್ಯಇಲಾಖೆ,ಜನಪ್ರತಿನಿಧಿಗಳು, ಶಾಸಕರು, ಸಂಸದರ ಸಹಕಾರದಿಂದಾಗಿ ಇದು ಸಾಧ್ಯ. ಮಲೆನಾಡಿಗೆ ಬೃಹತ್ ಜಲವಿದ್ಯುತ್, ಅಣುವಿದ್ಯುತ್, ಉಷ್ಣವಿದ್ಯುತ್ ಸ್ಥಾವರಗಳು ಬರಬಾರದು. ಬದಲಿಗೆ ಹಿಂದಿನ ಸರ್ಕಾರಕ್ಕೆ ಒತ್ತಾಯಿಸಿದಂತೆ ಈಗಿನ ಸರ್ಕಾರಕ್ಕೂ ಕೂಡ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಒತ್ತಾಯಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಹೆಸ್ಕಾಂ ಇಂಜಿನಿಯರ್ ದೀಪಕ್ ಕಾಮತ್, ಕದಂಬ ಮಾರ್ಕೆಟಿಂಗ್ ಸಂಸ್ಥೆ ಅಧ್ಯಕ್ಷ ಶಂಭುಲಿಂಗ ಹೆಗಡೆ, ನಾರಾಯಣ ಹೆಗಡೆ ಗಡಿಕೈ, ಸ್ಕೋಡವೇಸ್ ಕಾರ್ಯನಿರ್ವಾಹಕ ನಿರ್ದೇಶಕ ಡಾ.ವೆಂಕಟೇಶ ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು. ಸಾವಯವ ಒಕ್ಕೂಟ ಅಧ್ಯಕ್ಷ ವಿಶ್ವೇಶ್ವರ ಭಟ್ ಸ್ವಾಗತಿಸಿದರೆ, ವಿಕಾಸ್ ಹೆಗಡೆ ಕಾರ್ಯಕ್ರಮವನ್ನು ನಿರ್ವಹಿಸಿದರು.
“ಸಾವಯವ ಕೃಷಿ ಸಾಧಕ” ಪ್ರಶಸ್ತಿ ಪ್ರದಾನ
ಕಾರ್ಯಕ್ರಮದಲ್ಲಿ 2023-24 ನೇ ಸಾಲಿನ ಸಾವಯವ ಕೃಷಿ ಸಾಧಕ ಪ್ರಶಸ್ತಿಯನ್ನು ಜೊಯಿಡಾ ತಾಲೂಕಿನ ಪಣಸೋಲಿ, ಅಂಬೋಡೆಯ ರವೀಂದ್ರ ಸಾಂಬಾ ಭಟ್ ನೀಡಿ ಗೌರವಿಸಲಾಯಿತು. ಸಾವಯವ ಪದ್ಧತಿಯಲ್ಲಿ ಯಾಲಕ್ಕಿ, ಕಾಳುಮೆಣಸು, ಜಾಯಿಕಾಯಿ, ಲವಂಗ ಮುಂತಾದ ಬೆಳೆಗಳನ್ನು ಬೆಳೆದು ಸರಿ ಸುಮಾರು 30 ಲಕ್ಷಕ್ಕೂ ಅಧಿಕ ಮೌಲ್ಯದ ಸಾವಯವ ಉತ್ಪನ್ನಗಳನ್ನು ಸಾವಯವ ಒಕ್ಕೂಟಕ್ಕೆ ಮಾರಾಟ ಮಾಡಿರುವ ಕೀರ್ತಿ ಇವರದ್ದಾಗಿದೆ.
ಸಾವಯವ ಒಕ್ಕೂಟದಿಂದ ಪ್ರತೀ ವರ್ಷ ಆಡಳಿತ ಮಂಡಳಿ ಹಾಗೂ ಸಾವಯವ ಸಿಬ್ಬಂದಿ ಜಂಟಿಯಾಗಿ ಆಯ್ಕೆ ಮಾಡುವ ಒಬ್ಬ ಅತ್ಯುತ್ತಮ ಸಾವಯವ ಕೃಷಿಕನಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದ್ದು, ಸಾವಯವ ಕೃಷಿ ಪದ್ಧತಿಯಲ್ಲಿ ಉತ್ಪನ್ನಗಳನ್ನು ಬೆಳೆದು ಉತ್ತರ ಕನ್ನಡ ಸಾವಯವ ಒಕ್ಕೂಟಕ್ಕೆ ವಿಕ್ರಯಿಸುತ್ತಿರುವ ಸಾವಯವ ಕೃಷಿಕರಿಗೆ ಸಹಕಾರಿಯ ವತಿಯಿಂದ ಸಲ್ಲಿಸುವ ಗೌರವ ಇದಾಗಿದೆ.ಸಾವಯವ ಕೃಷಿಯನ್ನು ಹಾಗೂ ಸಾವಯವ ಕೃಷಿಕರನ್ನು ಉತ್ತೇಜಿಸುವುದು ಹಾಗೂ ನಮ್ಮ ಜಿಲ್ಲೆಯಲ್ಲಿ ಸಾವಯವಕ್ಕೆ ಪ್ರಾಮುಖ್ಯತೆ ಕೊಡುವ ಉದ್ದೇಶ ಇದಾಗಿದೆ.