ಶಿರಸಿ : ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗಾಗಿ ಅನೇಕ ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗಿದೆ. ಅದರಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೆ, ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ, ಎಂದು ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದ ಧರ್ಮದರ್ಶಿ ಮಂಡಳದ ಅಧ್ಯಕ್ಷ ಆರ್.ಜಿ.ನಾಯ್ಕ ಹೇಳಿದರು.
ಅವರು ಶನಿವಾರ ಇಲ್ಲಿನ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಶಿರಸಿ ಶ್ರೀ ಮಾರಿಕಾಂಬಾ ದೇವಸ್ಥಾನದಿಂದ ನವರಾತ್ರಿ ಅಂಗವಾಗಿ ಆಯೋಜಿಸಲಾದ ಕ್ರೀಡಾ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡುತ್ತಾ, ಪ್ರಕೃತಿಯ ಸಹಕಾರದಿಂದ ತಂಪು ವಾತಾವರಣದಲ್ಲಿ ಶಾಂತವಾಗಿ ಕ್ರೀಡೆ ನಡೆಸಲು ಸಹಕಾರಿಯಾದ ವಾತಾವರಣವಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸುದೇಶ ಜೋಗಳೇಕರ, ಧರ್ಮದರ್ಶಿ ಸುಧೀರ ಹಂದ್ರಾಳ, ಬಾಬದಾರರಾದ ಸತೀಶ ಸಾಲೇರ್, ಜಗದೀಶ ಕುರುಬರ, ರಾಜಣ್ಣ ಚಕ್ರಸಾಲಿ, ದೇವಸ್ಥಾನದ ವ್ಯವಸ್ಥಾಪಕ ಚಂದ್ರಕಾಂತ ಹಾಗೂ ಇತರರು ಉಪಸ್ಥಿತರಿದ್ದರು. ತಾಲೂಕಾ ಯುವಜನ ಮತ್ತು ಕ್ರೀಡಾಧಿಕಾರಿ ಕಿರಣ ನಾಯ್ಕ ಸ್ವಾಗತಿಸಿ, ನಿರೂಪಿಸಿದರು. ಅಶೋಕ ಭಜಂತ್ರಿ ವಂದಿಸಿದರು.